ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ಶಾಂತಿಯನ್ನು ಸಾಧಿಸಲು ಮುಂದುವರಿಯಬೇಕೆಂದು ಆಶಿಸುತ್ತೇವೆ. ಈ ಸಂಘರ್ಷ ಆದಷ್ಟು ಬೇಗ ಕೊನೆಗೊಳ್ಳಬೇಕೆಂದು ಭಾರತ ಬಯಸುತ್ತದೆ. ಉಕ್ರೇನ್ ಮತ್ತು ರಷ್ಯಾದ ನಡುವೆ ಶಾಶ್ವತ ಶಾಂತಿಯನ್ನು ಕಂಡುಕೊಳ್ಳುವ ಮಾರ್ಗವು ಇಡೀ ಜಗತ್ತಿನ ಮಾನವೀಯತೆಯ ಕರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ಸಭೆ ನಡೆಸಿದರು. ಇಬ್ಬರೂ ನಾಯಕರು ಉಕ್ರೇನ್ ಹಾಗೂ ರಷ್ಯಾದ ನಡುವಿನ ಸಂಘರ್ಷ ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು. ಭಾರತ-ರಷ್ಯಾ ಪಾಲುದಾರಿಕೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಕಷ್ಟದ ಸಮಯದಲ್ಲಿ ಭಾರತ ಮತ್ತು ರಷ್ಯಾ ಒಟ್ಟಾಗಿ ನಿಂತಿರುವುದು ನಮ್ಮ ವಿಶೇಷ. ಕಠಿಣ ಸಂದರ್ಭದಲ್ಲೂ ಎರಡೂ ದೇಶಗಳು ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಎಂದು ಮೋದಿ ಹೇಳಿದರು.
ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ನಾವು ನಿರಂತರವಾಗಿ ಚರ್ಚಿಸುತ್ತಿದ್ದೇವೆ. ಈ ಸಂಘರ್ಷವನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಬೇಕು ಮತ್ತು ಶಾಶ್ವತ ಶಾಂತಿಗೆ ಮಾರ್ಗವನ್ನು ತ್ವರಿತವಾಗಿ ಕಂಡುಕೊಳ್ಳಬೇಕು. ಶಾಂತಿಯ ದಿಕ್ಕಿನಲ್ಲಿ ಇತ್ತೀಚೆಗೆ ರಷ್ಯಾ ಹಾಗೂ ಉಕ್ರೇನ್ ಮಾಡಿದ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ಪ್ರಧಾನಿ ಮೋದಿ ಪುಟಿನ್ಗೆ ಸಲಹೆ ನೀಡಿದ್ದಾರೆ.
ಪುಟಿನ್ ಅವರೊಂದಿಗಿನ ಭೇಟಿ ಸ್ಮರಣೀಯ. ಡಿಸೆಂಬರ್‌ನಲ್ಲಿ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡುವುದನ್ನು ನಾವು ಕಾಯುತ್ತಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ. ಈ ವರ್ಷ ಡಿಸೆಂಬರ್‌ನಲ್ಲಿ ನಡೆಯಲಿರುವ 23ನೇ ಭಾರತ-ರಷ್ಯಾ ಶೃಂಗಸಭೆಗೆ ಪ್ರಧಾನಿಯವರು ಅಧ್ಯಕ್ಷ ಪುಟಿನ್ ಅವರನ್ನು ಆಹ್ವಾನಿಸಿದರು.
ಉಭಯ ರಾಷ್ಟ್ರಗಳ ಸಂಬಂಧವು ತತ್ವಗಳನ್ನು ಆಧರಿಸಿದೆ, ನಮ್ಮ ನಡುವೆ ಬಹುಮುಖಿ ಸಹಕಾರವಿದೆ. ರಷ್ಯಾ ಮತ್ತು ಭಾರತದ ನಡುವೆ ಅತ್ಯಂತ ವಿಶ್ವಾಸಾರ್ಹ ಸಂಬಂಧವಿದೆ, ಅದು ರಾಜಕೀಯವನ್ನು ಆಧರಿಸಿಲ್ಲ ಎಂದು ಪುಟಿನ್ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದ ತೈಲವನ್ನು ಖರೀದಿಸಿದ ಕಾರಣಕ್ಕೆ ಭಾರತದ ಮೇಲೆ ಹೆಚ್ಚಿನ ಸುಂಕ ವಿಧಿಸಿದ ಬೆನ್ನಲ್ಲೇ ಭಾರತ ಮತ್ತು ರಷ್ಯಾ ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಮಾತುಗಳನ್ನಾಡಿವೆ.