ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ಇಎಸ್ಐಸಿ ಆಸ್ಪತ್ರೆಯಲ್ಲಿ ಲೋ ಬಿಪಿಯಿಂದ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ. ಚಿತ್ತಾಪುರ ತಾಲೂಕಿನ ತೊನಸನಹಳ್ಳಿ ಗ್ರಾಮದ ನಿವಾಸಿ ಶಿಲ್ಪಾ (32) ಮೃತಪಟ್ಟವರು.
ಹೆರಿಗೆಗಾಗಿ ಇಎಸ್ಐಸಿ ಆಸ್ಪತ್ರೆಗೆ ದಾಖಲಾಗಿದ್ದ ಶಿಲ್ಪಾ, ಅಂದೇ ಗಂಡು ಮಗುವಿಗೆ ಜನ್ಮ ನೀಡಿದರು. ನಿರಂತರ ರಕ್ತ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿಗೆ ರಾಜ್ಯದಲ್ಲಿ ಬಾಣಂತಿಯರ ಸಾವಿನ ಸರಣಿಗೆ ಪ್ರಕರಣಸೇರ್ಪಡೆಯಾಗುತ್ತಲೇ ಇದೆ. ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯ ಹೊಟ್ಟೆಯಲ್ಲಿ ಬಟ್ಟೆಯ ಉಂಡೆಯನ್ನೇ ಬಿಟ್ಟು ವೈದ್ಯರು ಪ್ರಮಾದವೆಸಗಿರುವುದು ಸುದ್ದಿಯಾಗಿತ್ತು. ಈಗ ಇಎಸ್ಐಸಿ ಆಸ್ಪತ್ರೆಯಲ್ಲಿ ಬಾಣಂತಿಯ ಸಾವಾಗಿದೆ.
ಬಳ್ಳಾರಿಯ ಬಿಮ್ಸ್‌ನಲ್ಲಿ ಬಾಣಂತಿಯರ ಸರಣಿ ಸಾವು ರಾಜ್ಯಾದ್ಯಂತ ಆತಂಕ ಹುಟ್ಟಿಸಿತ್ತು, ಈ ಸಂಬಂಧ ಸರ್ಕಾರ ತನಿಖೆ ಕೂಡ ನಡೆಸಿತ್ತು. ಬಳಿಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳಲ್ಲೂ ಬಾಣಂತಿಯ ಸಾವುಗಳು ನಡೆದಿರುವುದು ಆರೋಗ್ಯ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.