ಭಾರತದ ದೇಶೀಯ ಕ್ರಿಕೆಟ್‌ನ ಅತಿದೊಡ್ಡ ಟಿ20 ಟೂರ್ನಮೆಂಟ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025 ಪಂದ್ಯಾವಳಿಯಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ನಾಲ್ವರು ಆಟಗಾರರನ್ನು ಅಮಾನತುಗೊಳಿಸಿದೆ.
ಲಕ್ನೋದಲ್ಲಿ ನಡೆದ ಪಂದ್ಯಗಳ ಸಮಯದಲ್ಲಿ ನಾಲ್ವರು ಆಟಗಾರರು ಇತರ ತಂಡದ ಸದಸ್ಯರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ ಮತ್ತು ವಿಷಯದ ಗಂಭೀರತೆಯಿಂದಾಗಿ ತನಿಖೆಯನ್ನು ಪ್ರಾರಂಭಿಸಲಾಗಿದೆ. ಅಸ್ಸಾಂ ಕ್ರಿಕೆಟ್ ತಂಡದ ನಾಲ್ವರು ಆಟಗಾರರಾದ ಅಮಿತ್ ಸಿನ್ಹಾ, ಇಶಾನ್ ಅಹ್ಮದ್, ಅಮನ್ ತ್ರಿಪಾಠಿ ಮತ್ತು ಅಭಿಷೇಕ್ ಠಾಕೂರಿ ಅವರ ವಿರುದ್ಧದ ಆರೋಪಗಳ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕವು ನಡೆಸಿದ ತನಿಖೆಯಲ್ಲಿ, ಈ ನಾಲ್ವರು ಆಟದ ಸಮಗ್ರತೆಗೆ ಧಕ್ಕೆ ತರುವ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ (ACA) ಕಾನೂನು ಕ್ರಮ ಕೈಗೊಂಡಿದೆ. ಅಲ್ಲದೆ ಶುಕ್ರವಾರ (ನಿನ್ನೆ) ಗುವಾಹಟಿ ಕ್ರಿಕೆಟ್ ಅಪರಾಧ ಶಾಖೆಯಲ್ಲಿ FIR ದಾಖಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಅಸ್ಸಾಂ ತಂಡಕ್ಕಾಗಿ ವಿವಿಧ ಹಂತಗಳಲ್ಲಿ ಆಡಿರುವ ನಾಲ್ವರು ಆಟಗಾರರು, ನವೆಂಬರ್ 26 ರಿಂದ ಡಿಸೆಂಬರ್ 8 ರವರೆಗೆ ಲಕ್ನೋದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025ರಲ್ಲಿ ಭಾಗವಹಿಸಿದ್ದರು. ಈ ವೇಳೆ, ಬೇರೆ ಆಟಗಾರರ ಮೇಲೆ ಪ್ರಭಾವ ಬೀರಲು ಮತ್ತು ಪ್ರಚೋದಿಸಲು ಪ್ರಯತ್ನಿಸಿದ ಆರೋಪ ಕೇಳಿ ಬಂದಿದ್ದಾಗಿ ಅದು ತಿಳಿಸಿದೆ.
ಅಮಾನತುಗೊಂಡಿರುವ ನಾಲ್ವರು ಆಟಗಾರರು ಈಗ ACA, ಅದರ ಜಿಲ್ಲಾ ಘಟಕಗಳು ಅಥವಾ ಸಂಯೋಜಿತ ಕ್ಲಬ್‌ಗಳು ಆಯೋಜಿಸುವ ಯಾವುದೇ ರಾಜ್ಯ ಮಟ್ಟದ ಪಂದ್ಯಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ. ಅಲ್ಲದೇ ಅಮಾನತುಗೊಂಡಿರುವ ಅವಧಿಯಲ್ಲಿ ಮ್ಯಾಚ್ ರೆಫರಿ, ಕೋಚ್ ಅಥವಾ ಅಂಪೈರ್ ನಂತಹ ಕ್ರಿಕೆಟ್ ಸಂಬಂಧಿತ ಚಟುವಟಿಕೆಯಲ್ಲೂ ಭಾಗವಹಿಸುವಂತಿಲ್ಲ ಎಂದು ಎಸಿಎ ತಿಳಿಸಿದೆ.


