ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳ ಹತ್ಯೆ ಕೃತ್ಯದ ಮಾಸ್ಟರ್ ಮೈಂಡ್ ಸೈಫುಲ್ಲಾ ಖಾಲಿದ್ ಎನ್ನುವುದು ದೃಢಪಟ್ಟಿದೆ. ದಾಳಿಯನ್ನು ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ.
ಲಷ್ಕರ್ ಸಂಘಟನೆಯ ಟಾಪ್ ಕಮಾಂಡರ್ ಆಗಿರುವ ಸೈಫುಲ್ಲಾ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಇಬ್ಬರು ಈ ಕೃತ್ಯದ ಹಿಂದೆ ಇರುವುದಾಗಿ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಲಷ್ಕರ್-ಎ-ತೈಬಾ ಉಪ ಮುಖ್ಯಸ್ಥನಾಗಿರುವ ಸೈಫುಲ್ಲಾ ಖಾಲಿದ್ ಮುಂಬೈ ದಾಳಿ ಸೂತ್ರಧಾರ ಹಫೀಜ್ ಸಯೀದ್ ಗೆ ಆಪ್ತ ಎನ್ನಲಾಗಿದೆ. ಸದಾ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವ ಈತನಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಿಡಿದಿರುವ ಲಷ್ಕರ್ ಉಗ್ರರು ಭದ್ರತೆ ನೀಡುತ್ತಾರೆ, ಪಾಕ್ ಸೇನಾ ಅಧಿಕಾರಿಗಳ ಜೊತೆಗೂ ಈತ ಉತ್ತಮ ಸಂಬಂಧ ಹೊಂದಿದ್ದಾನೆ. ಎರಡು ತಿಂಗಳ ಹಿಂದೆ ಸೈಫುಲ್ಲಾ ಖಾಲಿದ್ ಪಾಕಿಸ್ತಾನದ ಪಂಜಾಬ್‌ನ ಕಂಗನ್ ಪುರಕ್ಕೆ ಭೇಟಿ ನೀಡಿದ್ದ. ಕಂಗನ್‌ಪುರದಲ್ಲಿ ಪಾಕ್ ಸೇನೆಯ ದೊಡ್ಡ ಬೆಟಾಲಿಯನ್ ಇದೆ. ಪಾಕ್ ಸೇನೆಯ ಕರ್ನಲ್ ಜಾಹಿದ್ ಜರೀನ್ ಭಾರತದ ವಿರುದ್ಧ ಜಿಹಾದಿ ಭಾಷಣ ಮಾಡಲು ಈತನನ್ನು ಕರೆಸಿದ್ದ. ಭಾಷಣದಲ್ಲಿ ಪಾಕ್ ಸೇನೆಯನ್ನು ಭಾರತದ ವಿರುದ್ಧದ ಕೃತ್ಯಕ್ಕೆ ಪ್ರಚೋದಿಸಿದ್ದ.
ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಮುಂಬರುವ ದಿನಗಳಲ್ಲಿ ಮುಜಾಹಿದ್ದೀನ್ ದಾಳಿ ತೀವ್ರಗೊಳ್ಳಲಿದೆ. ಫೆಬ್ರವರಿ 2, 2026 ರೊಳಗೆ ಕಾಶ್ಮೀರ ಸ್ವತಂತ್ರವಾಗಲಿದೆ ಎಂದು ನಾವು ಭಾವಿಸುವುದಾಗಿ ಕಳೆದ ಫೆಬ್ರವರಿಯಲ್ಲಿ ಹೇಳಿದ್ದ. ಈ ಸಭೆಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಪಾಕಿಸ್ತಾನ ಸೇನೆ ಜಂಟಿಯಾಗಿ ಆಯೋಜಿಸಿದ್ದವು.
ಗುಪ್ತಚರ ವರದಿಯ ಪ್ರಕಾರ, ಕಳೆದ ವರ್ಷ ಅಬೋಟಾಬಾದ್ ಕಾಡುಗಳಲ್ಲಿ ಆಯೋಜಿಸಲಾದ ಭಯೋತ್ಪಾದಕ ಶಿಬಿರದಲ್ಲಿ ನೂರಾರು ಪಾಕಿಸ್ತಾನಿ ಹುಡುಗರು ಭಾಗವಹಿಸಿದ್ದರು. ಇದನ್ನು ಲಷ್ಕರ್-ಎ-ತೈಬಾದ ರಾಜಕೀಯ ವಿಭಾಗ ಪಿಎಂಎಂಎಲ್ ಮತ್ತು ಎಸ್‌ಎಂಎಲ್ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲೂ ಸೈಫುಲ್ಲಾ ಖಾಲಿದ್ ಭಾಗವಹಿಸಿದ್ದ. ಸೈಫುಲ್ಲಾ ಅಲ್ಲಿದ್ದ ಹುಡುಗರನ್ನು ಭಾರತದ ವಿರುದ್ಧ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಮೂಲಕ ಪ್ರಚೋದಿಸಿದ್ದ. ಈ ಹುಡುಗರಿಗೆ ಭಯೋತ್ಪಾದಕ ತರಬೇತಿ ನೀಡಿದ ನಂತರ ಅವರನ್ನು ಪಾಕಿಸ್ತಾನಿ ಸೇನೆಯ ಸಹಾಯದಿಂದ ಭಾರತದ ಒಳಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.