ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆಆರ್ ಮಾರುಕಟ್ಟೆ ಸಮೀಪ ಸಂಭವಿಸಿದೆ.
ಕೆ.ಆರ್ ಮಾರ್ಕೆಟ್ ಬಳಿಯ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಮದನ್ (38), ಪತ್ನಿ ಸಂಗೀತಾ (33) ಮಿತೇಶ್ (8), ವಿಹಾನ್ (5) ಹಾಗೂ ಮತ್ತೊಂದು ಮಹಡಿಯಲ್ಲಿದ್ದ ಸುರೇಶ್ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾತ್ರಿ 2.30ರ ಸುಮಾರಿಗೆ ಅಗ್ನಿ ಅವಗಢ ಸಂಭವಿಸಿದ ಮಾಹಿತಿ ಬಂತು. ಅಗ್ನಿಶಾಮಕ ದಳದವರು ನಮ್ಮ ಪೊಲೀಸ್ರು ಪರಿಶೀಲನೆ ಮಾಡ್ತಿದ್ದಾರೆ. ಗ್ರೌಂಡ್ ಫ್ಲೋರ್ ನಲ್ಲಿರುವ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಅದು ಮೇಲಿನ ಅಂತಸ್ತುಗಳಿಗೆ ಆವರಿಸಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಕಟ್ಟಡದಲ್ಲಿದ್ದ ಬಹುತೇಕ ಜನ ಓಡಿ ಹೋಗಿದ್ದಾರೆ. ಆದ್ರೆ ಒಂದು ಫ್ಯಾಮಿಲಿ ಮಾತ್ರ ಬೆಂಕಿ ಕೆನ್ನಾಲಿಗೆಗೆ ಸಿಲುಕಿಕೊಂಡಿದೆ ಎಂದರು.
ಎರಡು ಮೃತದೇಹಗಳನ್ನ ಈಗಾಗಲೇ ಹೊರ ತೆಗೆಯಲಾಗಿದೆ. ಮೇಲಿನ ಫ್ಲೋರ್ ನಲ್ಲಿ ಕಂಪ್ಲೀಟ್ ಬೆಂಕಿ, ಹೊಗೆ ಆವರಿಸಿದೆ ಒಳಗಡೆ ಹೋಗೋದಕ್ಕೆ ಆಗ್ತಿಲ್ಲ, ಹೀಗಾಗಿ ಒಳಗಡೆ ಸಿಲುಕಿದವರನ್ನ ಹುಡುಕಲು ಆಗ್ತಿಲ್ಲ. ಕಾರ್ಯಾಚರಣೆ ಮುಂದುವರಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ, ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಹಾಗೂ ನಮ್ಮ ರಕ್ಷಣಾ ತಂಡದವರು ಕಾರ್ಯಾಚರಣೆ ಮಾಡ್ತಿದ್ದಾರೆ. ಇನ್ನು ಮೃತದೇಹಗಳು ಇರುವ ಶಂಕೆ ಇದೆ ಎಂದು ತಿಳಿಸಿದ್ದಾರೆ.
ಕೆ.ಆರ್ ಮಾರ್ಕೆಟ್ ಬಳಿಯ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿದ್ದ ಮಹಡಿ ಮನೆಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ಅಂಬುಲೆನ್ಸ್‌ಗಳನ್ನ ನಿಯೋಜನೆ ಮಾಡಲಾಗಿದೆ.