ಬೆಳಗಾವಿ: ರಾಜ್ಯದಲ್ಲೇ ಪ್ರಥಮ ಬಾರಿಗೆ 3 ಸಾವಿರ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಸೋಮವಾರವಾದ ಇಂದು ನಗರದಲ್ಲಿ ಹಮ್ಮಿಕೊಂಡಿದ್ದು,ತವರು ಮನೆಯಲ್ಲಿ ಸಿಗುವ ಆತಿಥ್ಯದಂತೆ ಗರ್ಭಿಣಿಯರಿಗೆ ಉಡಿ ತುಂಬಿ, ಹೋಳಿಗೆ ಊಟ ಹಾಕುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ನಗರದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ನಗರದ ಸಿಪಿಇಡ್ ಮೈದಾನದಲ್ಲಿ ನಡೆಸುವ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಹುಟ್ಟುವ ಮಗು ಮತ್ತು ತಾಯಿ ಆರೋಗ್ಯಪೂರ್ಣವಾಗಿರಲಿ. ತಾಯಿಯ ಮಾನಸಿಕ ವಿಕಸಿತವಾಗಲಿ, ಒಂದು ದಿನ ನಮ್ಮ ಇಲಾಖೆ ಜೊತೆ ಸಂತೋಷದಿಂದ ಕಳೆಯಲಿ ಎನ್ನುವ ಉದ್ದೇಶದಿಂದ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಇದೇ ಐದು ಜಿಲ್ಲೆಗಳ ಸ್ತ್ರೀ ಶಕ್ತಿ ಸಂಘಗಳ ವಸ್ತು ಪ್ರದರ್ಶನ ಕೂಡ ನಡೆಯಲಿದೆ. ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೂ ಸನ್ಮಾನ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.
ವಿಶ್ವ ವಿಶೇಷಚೇತನರ ದಿನಾಚರಣೆ ಅಂಗವಾಗಿ ಸುಮಾರು 100 ಜನರಿಗೆ ತ್ರಿಚಕ್ರ ವಾಹನ, ಅಂಧ ಮಕ್ಕಳಿಗೆ ಬ್ರೇಲ್ ಲ್ಯಾಪಟಾಪ್ ವಿತರಣೆ ಸೇರಿ ಮತ್ತಿತರ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. 3 ತಿಂಗಳ ಗರ್ಭಿಣಿಯಿಂದ ಹಿಡಿದು 100 ವರ್ಷದ ಮನುಷ್ಯನ ಬದುಕು ಕಟ್ಟುವ ಸೇವೆಯನ್ನು ನಮ್ಮ ಇಲಾಖೆ ಮಾಡುತ್ತಿದೆ” ಎಂದರು.
“ಬಹಳ ಬಿಸಿಲು ಇರುವ ಹಿನ್ನೆಲೆಯಲ್ಲಿ ಜರ್ಮನಿ ಟೆಂಟ್ ಹಾಕಿದ್ದೇವೆ. ನೀರು, ಬಿಸ್ಕಟ್, ಗ್ಲುಕೋಸ್ ಸೇರಿ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದೇವೆ. ಗರ್ಭಿಣಿಯರನ್ನು ಕರೆದುಕೊಂಡು ಬರುವುದು ಮತ್ತು ವಾಪಸ್ ಮನೆಗೆ ಮುಟ್ಟಿಸುವ ಜವಾಬ್ದಾರಿ ನಮ್ಮ ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಿದ್ದೇವೆ. ಪ್ರಾಯೋಗಿಕವಾಗಿ ನನ್ನ ಕ್ಷೇತ್ರದಿಂದಲೇ ವಿನೂತನ ಕಾರ್ಯಕ್ರಮ ಆರಂಭಿಸಿದ್ದೇವೆ. 26ರಂದು ಬಳ್ಳಾರಿಯಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಪ್ರಾಯೋಗಿಕವಾಗಿ ಇದು ಮೊದಲ ಪ್ರಯತ್ನವಾಗಿದ್ದು, ಇದರ ಯಶಸ್ಸು ನೋಡಿಕೊಂಡು ಮುಂದಿನ ವರ್ಷ ದೊಡ್ಡ ಮಟ್ಟದಲ್ಲಿ ಆಯೋಜಿಸಲಿದ್ದೇವೆ” ಎಂದು ಹೆಬ್ಬಾಳ್ಕರ್ ತಿಳಿಸಿದರು.
ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ನಾಯಕರು ಬರ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ನಾನು ಮತ್ತು ಸತೀಶ್ ಜಾರಕಿಹೊಳಿ ಅವರು ರಾಜ್ಯಮಟ್ಟದ ನಾಯಕರೇ ಆಗಿದ್ದೇವೆ” ಎಂದು ಸಮರ್ಥಿಸಿಕೊಂಡರು.
ಗ್ರ್ಯಾಚುಟಿಗೆ ಆದೇಶ:
2011ರ ನಂತರ ನಿವೃತ್ತಿಯಾದವರಿಗೂ ಗ್ರ್ಯಾಚುಟಿ ನೀಡುವಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆ ಇದೆ. ಆದರೆ, 2023ಫೆ.17ರಂದು ಬೊಮ್ಮಾಯಿ ಸರ್ಕಾರ 2023ರ ನಂತರ ನಿವೃತ್ತಿಯಾದವರಿಗೆ ಗ್ರ್ಯಾಚುಟಿ ನೀಡುವ ಆದೇಶ ಹೊರಡಿಸಿದೆ. ಹಾಗಾಗಿ, ಮಾರ್ಚ್ 8ರಂದು ಸಾಂಕೇತಿಕವಾಗಿ ನಾಲ್ವರಿಗೆ ಗ್ರ್ಯಾಚುಟಿ ನೀಡಿದ್ದೇವೆ. 2023ರಿಂದ ನಿವೃತ್ತಿಯಾದವರಿಗೆ 39 ಕೋಟಿ ಹಣವನ್ನು ಹಂತ ಹಂತವಾಗಿ ಕೊಡುತ್ತಿದ್ದೇವೆ. ಇನ್ನು 2011ರಿಂದ ನೀಡಬೇಕೋ, 2023ರಿಂದ ಕೊಡಬೇಕೋ ಅಥವಾ ಎರಡೆರಡು ವರ್ಷಗಳಂತೆ ಮಾಡಿಕೊಂಡು ಅವರ ಬೇಡಿಕೆ ಈಡೇರಿಸಬೇಕೋ ಎಂದು ವಿಚಾರ ಮಾಡುತ್ತಿದ್ದೇವೆ” ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 6ನೇ ಗ್ಯಾರಂಟಿ ಯಾವಾಗ ಜಾರಿಗೆ ತರುತ್ತೀರಿ ಎಂಬ ಪ್ರಶ್ನೆಗೆ, “2017ರಂದು ಸಿಎಂ ಸಿದ್ದರಾಮಯ್ಯ ಅವರು 2 ಸಾವಿರ ರೂ. ಗೌರವಧನ ಹೆಚ್ಚಿಸಿದ್ದರು. ಅದಾದ ಬಳಿಕ ಯಾವ ಸರ್ಕಾರವೂ ಹೆಚ್ಚಿಕೆ ಮಾಡಿಲ್ಲ. ಕೇಂದ್ರ ಸರ್ಕಾರ 2 ಸಾವಿರ ರೂ. ಕೊಡುತ್ತದೆ. 9500 ರೂ. ರಾಜ್ಯ ಸರ್ಕಾರ ನೀಡುತ್ತದೆ. ಕಳೆದ 15 ವರ್ಷಗಳಿಂದ ಕೇಂದ್ರವು ಗೌರವಧನ ಹೆಚ್ಚಿಸಿಲ್ಲ. ಈ ಬಾರಿಯ ಬಜೆಟ್ನಲ್ಲಿ ನಾವು ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ ರೂ., ಸಹಾಯಕಿಯರಿಗೆ 750 ರೂ. ಘೋಷಣೆ ಮಾಡಿದ್ದೇವೆ. ಬರುವ ಮೂರು ವರ್ಷಗಳಲ್ಲಿ ಅವರ 6ನೇ ಗ್ಯಾರಂಟಿಯನ್ನೂ ಈಡೇರಿಸುತ್ತೇವೆ” ಭರವಸೆ ನೀಡಿದರು.
ಯುಗಾದಿ ಬಳಿಕ ಗೃಹಲಕ್ಷ್ಮೀ ಹಣ:
ಗೃಹಲಕ್ಷ್ಮೀ ಹಣ ಬಿಡುಗಡೆ ಕುರಿತು ಪ್ರತಿಕ್ರಿಯಿಸಿ,ಈಗಷ್ಟೇ ಬಜೆಟ್ ಮುಗಿಸಿ ಬಂದಿದ್ದೇನೆ. ಬಜೆಟ್ನಲ್ಲಿ ಎಲ್ಲರೂ ಬ್ಯುಸಿ ಆಗಿದ್ದರು. ಮಾರ್ಚ್ 31 ವರ್ಷದ ಕೊನೆಯದು. ಹಾಗಾಗಿ, ಮಾರ್ಚ್ 31 ಮುಗಿದ ತಕ್ಷಣ ಉಳಿದ ಎರಡು ಕಂತಿನ ಹಣ ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದರು.