ತುಮಕೂರಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಎರಡು ದಿನದಲ್ಲಿ 11 ಮಂಗಗಳು ನಿಗೂಢವಾಗಿ ಮೃತಪಟ್ಟಿವೆ. ಈ ಹಿನ್ನೆಲೆ ಅರಣ್ಯ ಪ್ರದೇಶದಲ್ಲಿ ಎರಡು ದಿನ ಶೋಧ ಕಾರ್ಯ ನಡೆಸಿದ್ದು, ಕೋತಿಗಳು ಯಾವುದೇ ಕಾಯಿಲೆಯಿಂದ ಮೃತಪಟ್ಟಿಲ್ಲ ಎಂಬುದು ತಿಳಿದುಬಂದಿದೆ.
ವಿಷ ಪ್ರಾಷನದಿಂದ ಮಂಗಗಳು ಮೃತಪಟ್ಟಿರುವ ಅನುಮಾನ ವ್ಯಕ್ತವಾಗಿದೆ. ಅರಣ್ಯಾಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಊರ್ಡಿಗೆರೆಯ ಪಶು ಆಸ್ಪತ್ರೆಯಲ್ಲಿ ಮೃತ ಕೋತಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಒಂದು ತಿಂಗಳ ಹಿಂದೆ ಬೆಳಗಾವಿಯಲ್ಲಿ 30 ಕೃಷ್ಣಮೃಗಗಳು ನಿಗೂಢವಾಗಿ ಮೃತಪಟ್ಟಿದ್ದವು.
ಮರಣೋತ್ತರ ಪರೀಕ್ಷೆ ವೇಳೆ ಮಂಗಗಳ ಹೊಟ್ಟೆಯಲ್ಲಿ ಅನ್ನ ಪತ್ತೆಯಾಗಿದ್ದು, ವಿಷ ಪ್ರಾಷನ ಆಗಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಕೆಲವು ಮಾದರಿಗಳನ್ನು ಬೆಂಗಳೂರಿನ ಪಶು ವೈದ್ಯಕೀಯ ವಿದ್ಯಾಲಯಕ್ಕೆ ರವಾನಿಸಲಾಗಿದೆ.
ತುಮಕೂರು ಪ್ರಾದೇಶಿಕ ವಲಯದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಮಂಗಗಳ ಸಾವಿನ ಹಿಂದಿರುವ ಕಾರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.


