ತುಮಕೂರಿನ ಶಿರಾದ ಕಳ್ಳಂಬೆಳ್ಳದಲ್ಲಿ ಎಂಟು ವರ್ಷದ ಮಗನ ಜೊತೆಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪರ ಪುರುಷನ ಜೊತೆಗಿನ ಅಕ್ರಮ ಸಂಬಂಧವೇ ಕಾರಣ ಎನ್ನಲಾಗಿದೆ.
ಗಂಡ ತೀರಿಕೊಂಡ ಬಳಿಕ ಮಹಿಳೆಯು ಆತನ ಸಹೋದರನನ್ನೇ ಮದುವೆಯಾಗಿದ್ದಳು. ಅದರೊಂದಿಗೆ ಪರ ಪುರುಷನ ಜೊತೆ ಸಂಬಂಧ ಹೊಂದಿರುವುದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪರಪುರುಷನ ಸಹವಾಸದಲ್ಲಿ ಆಕೆಗೆ ದೂರವಾಣಿ ಸಂಭಾಷಣೆ, ವೀಡಿಯೊ ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ನಡೆದಿದ್ದು, ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಹಂಸಲೇಖ (32) ಹಾಗೂ ಪುತ್ರ ಗುರುಪ್ರಸಾದ್ಆತ್ಮಹತ್ಯೆ ಮಾಡಿಕೊಂಡವರು. ಮಲ್ಲಿಕಾರ್ಜುನ ಎಂಬಾತನೊಂದಿಗೆ ಹಂಸಲೇಖ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ. ಆತ ತನ್ನ ಬಳಿ ಇರುವ ಸಂಭಾಷಣೆ ಮತ್ತು ವೀಡಿಯೊಗಳನ್ನು ಮುಂದಿಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಭಯಗೊಂಡ ಹಂಸಲೇಖ ಮಗನೊಂದಿಗೆ ಮನೆ ತೊರೆದು ಸ್ನೇಹಿತೆಯ ಮನೆಯಲ್ಲಿ ಉಳಿದುಕೊಂಡಿದ್ದಳು. ಮರುದಿನ ಬೆಳಗ್ಗೆ ಕಳ್ಳಂಬೆಳ್ಳ ಕೆರೆಯಲ್ಲಿ ತಾಯಿ–ಮಗ ಇಬ್ಬರೂ ನೀರಿಗೆ ಹಾರಿ ರುವುದು ಗೊತ್ತಾಗಿದೆ.
ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದರು.
ತನಿಖೆ ನಡೆಸುತ್ತಿರುವ ಪೊಲೀಸರು, ಬ್ಲ್ಯಾಕ್‌ಮೇಲ್ ಆರೋಪದ ಕುರಿತು ತನಿಖೆ ಆರಂಭಿಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಹಂಸಲೇಖ ಭೂಪಸಂದ್ರ ಗ್ರಾಮದ ನಾಗೇಶ್ ಜೊತೆ ಮದುವೆಯಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದರು. ಕೆಲವು ವರ್ಷಗಳ ಹಿಂದೆ ನಾಗೇಶ್ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೂರು ವರ್ಷದ ಹಿಂದೆ ನಾಗೇಶ್ ಸಹೋದರ ಲೋಕೇಶ್ ಜತೆ ಹಂಸಲೇಖಗೆ ಮದುವೆ ಮಾಡಲಾಗಿತ್ತು. ಆದರೂ ಬೇರೆ ಪುರುಷನ ಸಹವಾಸ ಮಾಡಿದ್ದು, ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


