Menu

ಬೇರೆ ಯುವತಿ ಜೊತೆ ಮದುವೆ: ಮಂಟಪಕ್ಕೆ ಬಂದು ತನ್ನನ್ನೇ ಮದುವೆಯಾಗುವಂತೆ ಹಠ ಹಿಡಿದ ಪ್ರೇಯಸಿ

ಚಿಕ್ಕಮಗಳೂರಿನ ದೊಡ್ಡೇಗೌಡ ಕನ್ವೆನ್ಷನ್‌ ಹಾಲ್‌ನಲ್ಲಿ ಯುವಕ ಮದುವೆಯಾಗುತ್ತಿದ್ದಾಗ ಮಂಟಪಕ್ಕೆ ಬಂದ ಆತನ ಪ್ರೇಯಸಿ, ನಾನು ಇವನನ್ನೇ ಮದುವೆಯಾಗಬೇಕು.ಮದುವೆ ಆಗುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ, ವಿಷ ಕುಡಿದು ಸಾಯುತ್ತೇನೆ ಎಂದು ಗಲಾಟೆ ಮಾಡಿದ್ದಾಳೆ.

ಈತ 10 ವರ್ಷ ಪ್ರೀತಿಸಿ ಮೋಸ ಮಾಡಿದ್ದಾನೆಂದು ಯುವತಿ ದೂರಿದ್ದು, ಘಟನೆಯಿಂದಾಗಿ ಮದುವೆ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಕುಟುಂಬಸ್ಥರು ಮಂಟಪವನ್ನು ಖಾಲಿ ಮಾಡಿದ್ದಾರೆ.  ಹಾಸನದ ಬೇಲೂರಿನ ಅಶ್ವಿನಿ ಎಂಬ ಯುವತಿ ಕಲ್ಯಾಣ ನಗರ ನಿವಾಸಿ ಶರತ್ ಎಂಬಾತನನ್ನು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಶರತ್ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದ ವಿಷಯವನ್ನು ಮುಚ್ಚಿಟ್ಟು ಅಶ್ವಿನಿಯನ್ನು ಪ್ರೀತಿಸುವುದಾಗಿ ಹೇಳಿದ್ದ. ಆಕೆಯಿಂದ 4.5 ಲಕ್ಷ ರೂಪಾಯಿ ಪಡೆದಿದ್ದಾನೆ ಎಂದು ಆರೋಪಿಸಿದ್ದಾಳೆ.

ಶರತ್ ಅಶ್ವಿನಿಯ ತಾಯಿ ಬಳಿ ಹೋಗಿ ‘ನಿಮ್ಮ ಮಗಳನ್ನು ನಾನೇ ಮದುವೆಯಾಗುತ್ತೇನೆ’ ಎಂದು ಭರವಸೆ ನೀಡಿದ್ದ ಕಾರಣ ಕುಟುಂಬ ಆಕೆಗೆ ಬಂದ ಐದು ಉತ್ತಮ ಸಂಬಂಧಗಳನ್ನು ಬಿಟ್ಟಿದ್ದಾರೆ. ಈಗ ಶರತ್ ಮದುವೆಯಾಗಲು ನಿರಾಕರಿಸಿ ಬೇರೆ ಹುಡುಗಿಯೊಂದಿಗೆ ಮದುವೆಗೆ ಮುಂದಾಗಿದ್ದ.

ಶರತ್‌ನ ವಿವಾಹ ಮುಹೂರ್ತ ಬೆಳಗ್ಗೆ ನಡೆದಿದೆ, ಅರತಕ್ಷತೆಗೆ ಮೊದಲು ಅಶ್ವಿನಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದಾಳೆ. ಆತ ನನ್ನನ್ನು ಮದುವೆಯಾಗಬೇಕು, ಮದುವೆ ಆಗುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ. ಇಲ್ಲೇ ವಿಷ ಕುಡಿದು ಸಾಯುತ್ತೇನೆ ಎಂದು ಅಶ್ವಿನಿ ಕೂಗಾಡಿದ್ದಾಳೆ.

ಶರತ್‌ನ ಮೋಸದ ವಿರುದ್ಧ ಅಶ್ವಿನಿ ಈ ಹಿಂದೆಯೇ ಮೂರು ಪ್ರಕರಣಗಳನ್ನು ದಾಖಲಿಸಿದ್ದಳಾದರೂ, ಎಲ್ಲ ಕೇಸ್‌ಗಳಿಗೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಬೇರೊಬ್ಬ ಹುಡುಗಿಯನ್ನು ಮದುವೆಯಾಗಲು ಮುಂದಾಗಿದ್ದ ಎನ್ನಲಾಗಿದೆ.ಅಶ್ವಿನಿ ಮಂಟಪದೊಳಗೆ ಪ್ರವೇಶಿಸುತ್ತಿದ್ದಂತೆ ಹುಡುಗನ ಕಡೆಯವರು ಬಾಗಿಲು ಹಾಕಿಕೊಂಡರು. ಹುಡುಗನ ಕಡೆಯವರು ನನ್ನ ಮೇಲೆ ಹಲ್ಲೆ ಮಾಡಿ ಎಳೆದಾಡಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ಅಲ್ಲಿದ್ದವರು ವೀಡಿಯೊ ಮಾಡದಂತೆ ಶರತ್ ಕುಟುಂಬ ದವರು ಕ್ಯಾಮರಾಗಳಿಗೆ ಅಡ್ಡ ಬಂದಿದ್ದಾರೆ. ಗಲಾಟೆ ಹೆಚ್ಚಿದ ಕಾರಣ ಮದುವೆ ಮನೆಯವರು ಕಲ್ಯಾಣ ಮಂಟಪವನ್ನು ಖಾಲಿ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *