Thursday, October 23, 2025
Menu

ಅಬಕಾರಿ ಇಲಾಖೆ ಇತಿಹಾಸದಲ್ಲೆ ಹಲವು ಸುಧಾರಣಾ ಕ್ರಮ: ಸಚಿವ ಆರ್.ಬಿ. ತಿಮ್ಮಾಪೂರ

br timmapura

ಬೆಂಗಳೂರು: ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿ ನಡೆಸಿದರು.

ಮೊದಲೆರಡು ತ್ರೈಮಾಸಿಕದಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಆದಾಯ ಬಂದಿದೆ. ರೂ 16,290 ಕೋಟಿ ಆದಾಯದ ನಿರೀಕ್ಷೆ ಹೊಂದಲಾಗಿತ್ತು. ಆದರೆ, ರೂ 16,358 ಕೋಟಿ ಆದಾಯ ಬಂದಿದ್ದು, ನಿರೀಕ್ಷೆಗಿಂತ ರೂ 68.78 ಕೋಟಿ ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದರು.

ಇದರ ಜೊತೆಗೆ ಅಬಕಾರಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ತೆರಿಗೆ ಸಂಗ್ರಹಣೆ ಇಲಾಖೆಯಲ್ಲಿ ಮೊದಲ ಬಾರಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಇಲಾಖೆಯಲ್ಲಿ ಡಿಜಿಟಲ್ ವ್ಯವಸ್ಥೆ ಜಾರಿ ಮಾಡಲಾಗುತ್ತಿದ್ದು, ಆನ್‌ಲೈನ್ ಮುಖಾಂತರ ಪರವಾನಿಗೆ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಭ್ರಷ್ಟಾಚಾರಕ್ಕೆ ಅವಕಾಶ ಸಿಗದಂತೆ ಸಿಎಲ್ 7 ಲೈಸನ್ಸ್ ನೀಡುವ ಹಂತಗಳನ್ನು ಕಡಿತಗೊಳಿಸಲಾಗಿದೆ ಎಂದು ಸಚಿವ ತಿಮ್ಮಾಪೂರ ಅವರು ಹೇಳಿದರು.

ಅಲ್ಲದೆ, ಅಬಕಾರಿ ಇಲಾಖೆಯಲ್ಲಿ ದಕ್ಷತೆಯ ಆಡಳಿತ ಜಾರಿ ಮಾಡಬೇಕೆಂಬುದು ನಮ್ಮ ಸರ್ಕಾರದ ಧ್ಯೇಯ. ಆದರೂ ಕೆಲವು ಅಧಿಕಾರಿಗಳು ನಿರ್ಲಕ್ಷ್ಯತೆ ತೋರಿದ್ದು ಕಂಡು ಬಂದಿದ್ದು, ಅಂತಹ ಅಧಿಕಾರಿಗಳ ಕ್ರಮ ಕೈಗೊಳ್ಳಲಾಗಿದೆ. ಎ ವೃಂದದ 31, ಬಿ ವೃಂದದ 20, 43 ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಮೇಲೆ ಶಿಸ್ತು ಕ್ರಮ ಚಾಲ್ತಿಯಲ್ಲಿದೆ ಎಂದು ಸಚಿವರು ತಿಳಿಸಿದರು.

ಇದರ ಜೊತೆಗೆ ಆಡಳಿತ ಸುಧಾರಣಾ ಆಯೋಗ ನೀಡಿದ ಶಿಫಾರಸ್ಸುಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುತ್ತಿದೆ. ಒಟ್ಟು 62 ಶಿಫಾರಸ್ಸುಗಳ ಮೇಲೆ ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳ ಜೊತೆ ಸಭೆ ನಡೆಸಿ ಶೇ. 95 ಶಿಫಾರಸ್ಸುಗಳಿಗೆ ಒಪ್ಪಿಗೆ ನೀಡಿ ಕಾರ್ಯರೂಪಕ್ಕೆ ತರಲು ಆದೇಶಿಸಿದ್ದೇನೆ. ಈಗಾಗಲೇ 13 ಶಿಫಾರಸ್ಸುಗಳು ಅನುಷ್ಠಾನ ಆಗಿದ್ದು, 49 ಶಿಫಾರಸ್ಸುಗಳು ಅನುಷ್ಠಾನದ ಹಂತದಲ್ಲಿವೆ ಎಂದು ಸಚಿವರು ತಿಳಿಸಿದರು.

ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಅಕ್ರಮ ಮದ್ಯ ಸಾಗಾಣೆ ಮೇಲೆ ಹದ್ದಿನಗಣ್ಣಿಡಲು ಸೂಚಿಸಲಾಗಿದ್ದು, ಬಾರ್ಡರ್ ಚೆಕ್ ಪೋಸ್ಟ್‌ನಲ್ಲಿರುವ ಸಿಬ್ಬಂದಿಯನ್ನು 15 ದಿನಗಳಿಗೊಮ್ಮೆ ಬದಲಿಸುತ್ತಿರುವಂತೆ ಆಯುಕ್ತರಿಗೆ ಸಚಿವರು ಸೂಚಿಸಿದರು.

ಸಿಹೆಚ್ ಪೌಡರ್, ಡ್ರಗ್ಸ್ ನಿಯಂತ್ರಣ ಮಾಡುವ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಸಾಕಷ್ಟು ಕ್ರಮವಹಿಸಬೇಕು. ಸಣ್ಣ ಪ್ಯಾಕೇಟ್‌ನಲ್ಲಿ ಸಿಹೆಚ್ ಪೌಡರ್ ತಂದು, ನೂರಾರು ಲೀಟರ್ ಮದ್ಯ ತಯಾರಿಸುವವರನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ಕೈಗೊಳ್ಳಬೇಕು. ಯುವಕರ ಆರೋಗ್ಯ, ಭವಿಷ್ಯದ ದೃಷ್ಟಿಯಿಂದ ಡ್ರಗ್ಸ್‌ಗೆ ಕಡಿವಾಣ ಹಾಕ್ಬೇಕು. ಎನ್‌ಡಿಪಿಎಸ್ ಕಾಯ್ದೆ ಸಮರ್ಪಕವಾಗಿ, ಮತ್ತಷ್ಟು ಪರಿಣಾಮವಾಗಿ ಜಾರಿಗೊಳಿಸಬೇಕು ಎಂದು ಸಚಿವರು ಸೂಚಿಸಿದರು.

ಉಳಿಕೆ ಲೈಸನ್ಸ್‌ಗಳ ಕುರಿತು ಮಾಧ್ಯಮದ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲವು ಉಳಿಕೆ ಲೈಸೆನ್ಸ್‌ಗಳಿದ್ದು, ಅವುಗಳನ್ನು ಹರಾಜು ಮಾಡಬೇಕೆಂಬ ಚಿಂತನೆಯಲ್ಲಿದ್ದೇವೆ ಎಂದರು.

ಸಭೆಯಲ್ಲಿ ಅಬಕಾರಿ ಆಯುಕ್ತ ವೆಂಕಟೇಶ್, ಅಪರ ಆಯುಕ್ತರಾದ ಮಂಜುನಾಥ್, ನಾಗರಾಜಪ್ಪ, ಸುರೇಶ್, ಎಂಎಸ್‌ಐಎಲ್ ನಿರ್ದೇಶಕ ಚಂದ್ರಪ್ಪ ಸೇರಿದಂತೆ ಅಬಕಾರಿ ಇಲಾಖೆ ಎಲ್ಲಾ ಜಂಟಿ ಆಯುಕ್ತರು, ಎಲ್ಲಾ ಉಪ ಆಯುಕ್ತರು ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *