ರಾಜ್ಯದ ಹಲವು ಜಲಾಶಯಗಳು ಭರ್ತಿಯಾಗಿದ್ದು, ನದಿ ಪಾತ್ರಗಳ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಡ್ಯಾಂ ಭರ್ತಿಯಾಗಿದ್ದು, ಕೃಷ್ಣಾ ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ.
ನಾರಾಯಣಪುರದ ಬಸವ ಸಾಗರ ಡ್ಯಾಂ ನಿಂದ ಕೃಷ್ಣಾ ನದಿಗೆ 2 ಲಕ್ಷ 80 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ 2 ಲಕ್ಷ 60 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ, ಜಲಾಶಯದ 30 ಕ್ರಸ್ಟ್ ಗೇಟ್ ತೆರೆದು ನೀರು ಬಿಡುಗಡೆ ಮಾಡಲಾಗಿದೆ.
ಬೀದರ್ ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯ ಭರ್ತಿಯಾಗಿದ್ದು, 7.6 ಟಿಎಂಸಿ ಸಾಮರ್ಥ್ಯದ ಕಾರಂಜಾ ಡ್ಯಾಮ್ ನಲ್ಲಿ ಸದ್ಯಕ್ಕೆ 7.5 ಟಿಎಂಸಿ ನೀರು ಸಂಗ್ರಹವಿದೆ. ತೆಲಂಗಾಣ ಮೂಲದ ಕೊತ್ತೂರ ಡ್ಯಾಮ್ ನಿಂದ ನೀರು ಬಿಟ್ಟ ಕಾರಣ ಅವಧಿಗೂ ಮುನ್ನವೇ ಕಾರಂಜಾ ಡ್ಯಾಮ್ ಭರ್ತಿಯಾಗಿದೆ. ಜಲಾಶಯಕ್ಕೆ ಒಟ್ಟು 2,000 ಕ್ಯೂಸೆಕ್ ಒಟ್ಟು 5000 ಕ್ಯೂಸೆಕ್ ಒಳ ಹರಿವು ಇದ್ದು, 6,000 ಕ್ಯೂಸೆಕ್ ನೀರು ಮಾಂಜ್ರಾ ನದಿಗೆ ಬಿಡಲಾಗಿದೆ.
ನದಿ ಪಕ್ಕದ ಗ್ರಾಮಗಳವರಿಗೆ ಜಿಲ್ಲಾಡಳಿತ ನೀರಿನತ್ತ ತೆರಳದಿರುವಂತೆ ಸೂಚನೆ ನೀಡಿದೆ. ಘಟಪ್ರಭೆಯ ಅಬ್ಬರಕ್ಕೆ ಗೋಕಾಕ ನಗರದ ನಾಲ್ಕು ಬಡಾವಣೆಗಳು ಮುಳುಗಡೆಯಾಗಿವೆ, ಉಪ್ಪಾರಪೇಟೆ, ಮಟನ್ ಮಾರ್ಕೆಟ್, ಕುಂಬಾರಗಲ್ಲಿಯಲ್ಲಿ ಪ್ರವಾಹದಿಂದ 300 ಕ್ಕೂ ಅಧಿಕ ಸಂತ್ರಸ್ತರ ಸ್ಥಳಾಂತರ ಮಾಡಲಾಗಿದೆ.
ಕಾಳಜಿ ಕೇಂದ್ರ ತೆರೆಯಲಾಗಿದ್ದು, ಡಿಸಿ ಹಾಗೂ ಸಿಇಒ ಭೇಟಿ ನೀಡಿ ಸಂತ್ರಸ್ತರ ನೋವನ್ನು ಆಲಿಸಿದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಸಂತ್ರಸ್ತರು ಮನವಿ ಮಾಡಿದ್ದಾರೆ. ಕಾಳಜಿ ಕೇಂದ್ರದಲ್ಲಿ ಊಟ, ಉಪಹಾರ ನಿಯಮಿತವಾಗಿ ಕೊಡ್ತಿಲ್ಲ ಎಂದು ಸಂತ್ರಸ್ತರು ದೂರಿದ್ದಾರೆ.