ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂಧೂರʼ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಯಶಸ್ಸು ಸಾಧಿಸಿದೆ. ಈ ಹಿನ್ನೆಲೆ ಯಲ್ಲಿ ಭಾರತ ರಕ್ಷಣಾ ಸಚಿವಾಲಯಕ್ಕೆ ಪ್ರಸಾದ ರೂಪದಲ್ಲಿ 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ.
ಶ್ರೀಗಳ 13ನೇ ಪಟ್ಟಾಭಿಷೇಕ ಮಹೋತ್ಸವದ ವೇಳೆ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯಲ್ಲಿ ಮಡಿದವರಿಗೆ ಹಾಗೂ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಹುತಾತ್ಮರಾದ ಯೋಧರಿಗೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸಿದರು. ಅಲ್ಲದೆ ಸೇನೆ ಮತ್ತು ಸರ್ಕಾರದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತೀಯ ಸೇನೆಗೆ ಚಿಕ್ಕಮಗಳೂರು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ 10 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಅವರಿಗೆ ಈ ಹಣವನ್ನು ಹಸ್ತಾಂತರ ಮಾಡಲಾಗಿದೆ. ಕ್ಷೇತ್ರದ 5ನೇ ಧರ್ಮಕರ್ತರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಧರ್ಮಕರ್ತ ಭೀಮೇಶ್ವರ ಜೋಶಿಯವರು ಚೆಕ್ ಹಸ್ತಾಂತರಿಸಿದರು.
ಕಾಪು ತಾಲೂಕು ಮಜೂರು ಗ್ರಾಮ ಪಂಚಾಯಿತಿ ವಾರ್ಷಿಕ ಬಜೆಟ್‌ನಲ್ಲಿ ರಾಷ್ಟ್ರ ಮತ್ತು ಸೈನಿಕರ ಹಿತದೃಷ್ಟಿಯಿಂದ ಎಲ್ಲ ಸದಸ್ಯರ ಒಪ್ಪಿಗೆಯ ಮೇರೆಗೆ 10 ಲಕ್ಷ ರೂ. ಮೊತ್ತವನ್ನು ಬಜೆಟ್‌ನಲ್ಲಿ ಮೀಸಲಿರಿಸಿದೆ ಎಂದು ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ಉಪಾಧ್ಯಕ್ಷೆ ಮಂಜುಳಾ ಆಚಾರ್ಯ ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ದೇಶದ ಹೆಮ್ಮೆ ಹಾಗೂ ಗೌರವ ಹೆಚ್ಚಿಸಿರುವ ಭಾರತೀಯ ಯೋಧರ ಶ್ರೇಯಸ್ಸಿಗಾಗಿ ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಲು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ನೀಡಿದ ಸೂಚನೆಯಂತೆ ಕೊಲ್ಲೂರು ಸೇರಿದಂತೆ ರಾಜ್ಯದ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.