ಕುಕಿ ಸಮುದಾಯದ ತನ್ನ ಪ್ರೇಯಸಿಯ ಭೇಟಿಗಾಗಿ ಬಂದಿದ್ದ ಮೈಥಿಯಿ ಯುವಕನ ಕೈಕಾಲು ಕಟ್ಟಿ ಹಾಕಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಣಿಪುರದ ಚುರಾಚಂದ್‌ಪುರದಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಮಣಿಪುರ ಮತ್ತೆ ಉದ್ವಿಗ್ನಗೊಂಡಿದೆ.
ಮಣಿಪುರವು ಕುಕಿ ಹಾಗೂ ಮೈಥಿಯಿ ಸಮುದಾಯಗಳ ನಡುವಿನ ಸಂಘರ್ಷದಿಂದ ನಲುಗಿ ಹೋಗಿದ್ದು, ಬೂದಿ ಮುಚ್ಚಿದ ಕೆಂಡದಂತಿದೆ. ಭೂಮಿ, ಗುರುತು ಮತ್ತು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ 2023ರಿಂದಲೂ ಈ ಸಮುದಾಯಗಳ ಮಧ್ಯೆ ಕಟು ವೈರತ್ವ ಮನೆ ಮಾಡಿದೆ.
31 ವರ್ಷದ ರಿಷಿಕಾಂತ್ ಚುರಾಚಂದ್‌ಪುರದಲ್ಲಿರುವ ಕುಕಿ ಸಮುದಾಯದ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿದ್ದಾಗ ಅಪಹರಿಸಿದ ದುಷ್ಕರ್ಮಿಗಳ ಗುಂಪು ಕ್ಯಾಮರಾ ಮುಂದೆಯೇ ಗುಂಡಿಕ್ಕಿ ಸಾಯಿಸಿದ್ದಾರೆ. ಈ ಘಟನೆಯಿಂದಾಗಿ ಮಣಿಪುರ ಮತ್ತೆ ಉದ್ವಿಗ್ನಗೊಂಡಿದೆ. ತುಯಿಬಾಂಗ್‌ನಲ್ಲಿರುವ ಗೆಳತಿಯ ನಿವಾಸದಿಂದ ರಿಷಿಕಾಂತ್‌ನನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಪಹರಿಸಿದ್ದು, ನಟಜಂಗ್ ಗ್ರಾಮದ ಬಳಿ ಅವರು ಶವವಾಗಿ ಪತ್ತೆಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ರಿಷಿಕಾಂತ ನೇಪಾಳದ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು, ಕ್ರಿಸ್‌ಮಸ್‌ಗೆ ಮೊದಲು ಅವರು ತಮ್ಮ ಗೆಳತಿಯನ್ನು ಭೇಟಿ ಮಾಡಿದ್ದರು ಮತ್ತು ಡಿಸೆಂಬರ್ 19 ರಿಂದ ಚುರಚಂದಪುರದಲ್ಲಿರುವ ಆಕೆಯ ಮನೆಯಲ್ಲೇ ವಾಸಿಸುತ್ತಿದ್ದರು. ಅವರ ಮೇಲೆ ಗುಂಡು ಹಾರಿಸಿದ ವೀಡಿಯೊವನ್ನು ದುಷ್ಕರ್ಮಿಗಳು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದು, ಅದರಲ್ಲಿ ಅವರು ಜೀವಕ್ಕಾಗಿ ಬೇಡಿಕೊಳ್ಳುವುದು ಕಾಣಿಸುತ್ತಿದೆ. ವೀಡಿಯೊದ ಕೊನೆಯಲ್ಲಿ ಆರೋಪಿಗಳು ನೋ ಪೀಸ್ ನೋ ಪಾಪ್ಯುಲರ್ ಗವರ್ನ್‌ಮೆಂಟ್ ಎಂಬ ಸಂದೇಶ ಸಾರಿದ್ದಾರೆ.
ರಿಷಿಕಾಂತ್ ಸಾವು ಖಂಡಿಸಿ ರಿಷಿಕಾಂತ್ ಅವರ ಗ್ರಾಮವಾದ ಕಕ್ಚಿಂಗ್ ಜಿಲ್ಲೆಯ ಖುನೌದಲ್ಲಿ ಪ್ರತಿಭಟನೆಗಳು ನಡೆದಿವೆ. ಈ ಜೋಡಿ ಚುರಾಚಂದ್‌ಪುರದಲ್ಲಿ ಉಳಿಯುವುದಕ್ಕೆ ಕುಕಿ ದಂಗೆಕೋರ ಗುಂಪುಗಳ ಒಂದು ಕೇಂದ್ರ ಸಂಸ್ಥೆಯಾದ ಕುಕಿ ರಾಷ್ಟ್ರೀಯ ಸಂಸ್ಥೆಯಿಂದ ಅನುಮತಿ ಪಡೆದಿದ್ದರು ಎಂದು ವರದಿಯಾಗಿದೆ. ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗುತ್ತಿದೆ ಎಂದು ರಾಜ್ಯಪಾಲ ಎ.ಕೆ. ಭಲ್ಲಾ ಹೇಳಿದ್ದಾರೆ.


