Menu

ಸಿಹಿ ಹುಳಿ ಖಾರ-ನಾಟಿ ಮಾವಿನ ಹಣ್ಣು ಸಾಂಬಾರ್‌ ರುಚಿ ಒಮ್ಮೆ ನೋಡಿ

ಸಿಹಿ, ಹುಳಿ, ಖಾರ ಸಮಪ್ರಮಾಣದಲ್ಲಿ ಸೇರಿಸಿ ಮಾಡಿದ ಮಾವಿನ ಹಣ್ಣಿನ ಸಾಂಬಾರ್‌ ಒಮ್ಮೆ ಮಾಡಿ, ನಾಲಿಗೆಗೆ ರುಚಿ ಹತ್ತಿದರೆ ಮತ್ತೊಮ್ಮೆ ನೀವು ಮಾವಿನ ಹಣ್ಣಿನ ಸಾಂಬಾರ್‌ ಮಾಡುತ್ತೀರಿ.

ಮಾಡುವುದು ಹೀಗೆ: ನಾಲ್ಕೈದು ಹುಳಿ ಸಿಹಿ ಮಿಶ್ರಿತ ನಾಟಿ ಮಾವಿನಹಣ್ಣು ಇಲ್ಲವೇ ಯಾವುದು ಸಿಗುವುದೋ ಆ ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಇಟ್ಟುಕೊಳ್ಳಿ, ನಾಟಿ ಹಣ್ಣುಗಳಾದರೆ ಓಟೆ ಇರಲಿ, ಓಟೆ ಬೇರ್ಪಡಿಸುವ ಅಗತ್ಯವಿಲ್ಲ. ಬೇರೆ ಹಣ್ಣುಗಳಾದರೆ ತುಂಡು ಮಾಡಿಟ್ಟುಕೊಳ್ಳಿ. ಸ್ವಲ್ಪ ಉಪ್ಪು , ಸ್ವಲ್ಪ ನೀರು ಹಾಕಿ ಬೇಯಲು ಬಿಡಿ.

ನಿಮಗೆ ಬೇಕೆನಿಸುವಷ್ಟು ಖಾರಕ್ಕೆ ಅಗತ್ಯ ಇರುವಂತೆ ಒಣ ಮೆಣಸು, ನಾಲ್ಕೈದು ಕಾಳು ಮೆಣಸು, ಅರ್ಧ ಟೀಸ್ಪೂನ್‌ ಜೀರಿಗೆ, ಒಂದು ಟೀ ಸ್ಪೂನ್‌ ಕೊತ್ತಂಬರಿ, ಕಾಲು ಟೀ ಸ್ಪೂನ್‌ ಸಾಸಿವೆ, ನಾಲ್ಕೈದು ಮೆಂತೆಕಾಳು, ಒಂದು ಟೀ ಸ್ಪೂನ್‌ ಉದ್ದಿನಬೇಳೆ, ನಾಲ್ಕೈದು ಕರಿಬೇವು ಎಲೆ ಎಣ್ಣೆ ಹಾಕದೆ ಹದವಾಗಿ ಹುರಿದಿಟ್ಟುಕೊಳ್ಳಿ. ಹುರಿದಿಟ್ಟ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿ, ನಂತರ ಅದಕ್ಕೆ ಎರಡು ಹಿಡಿಯಷ್ಟು ತೆಂಗಿನಕಾಯಿ ತುರಿ, ಸ್ವಲ್ಪ ಹುಣಸೆ ಹಣ್ಣು, ನಾಲ್ಕೈದು ಬೆಳ್ಳುಳ್ಳಿ ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. (ತೆಂಗಿನ ಕಾಯಿ ಬೇಡ ಅನ್ನುವವರು ಒಂದು ಹಿಡಿ ಬೇಳೆ ಬೇಯಿಸಿಕೊಂಡು ಮಸಾಲೆಗೆ ಹಾಕಿ ರುಬ್ಬಿಕೊಳ್ಳಿ) ಈಗ ಬೇಯಿಸಿಟ್ಟ ಮಾವಿನ ಹಣ್ಣಿಗೆ ರುಬ್ಬಿಟ್ಟ ಮಸಾಲೆ ಸೇರಿಸಿ ಕುದಿಸಿ, ಕುದಿಸುವ ಮೊದಲು ನಿಮ್ಮ ರುಚಿಗೆ ಬೇಕೆನಿಸುವಷ್ಟು ಬೆಲ್ಲ ಸೇರಿಸಿಕೊಳ್ಳಿ. ಚೆನ್ನಾಗಿ ಕುದಿದ ಮೇಲೆ ಸ್ಟವ್‌ನಿಂದ ಇಳಿಸಿ.

ಈಗ ಕುದಿದ ಸಾಂಬಾರ್‌ಗೆ ಚಿಟಿಕೆ ಇಂಗು, ಒಂದು ಎಸಳು ಬೆಳ್ಳುಳ್ಳಿ, ಒಂದು ಒಣಮೆಣಸು, ಜೀರಿಗೆ, ಸಾಸಿವೆ, ನಾಲ್ಕು ಕರಿಬೇವು ಎಲೆ ಸೇರಿಸಿ ಒಗ್ಗರಣೆ ಕೊಡಿ. ಅನ್ನಕ್ಕೆ ರುಚಿಯಾದ ಮಾವಿನ ಹಣ್ಣಿನ ಸಾಂಬಾರ್‌ ರೆಡಿಯಾಗುತ್ತದೆ. ಇಡ್ಲಿಗೂ ಈ ಸಾಂಬಾರ್‌ ಹೊಂದಿಕೆಯಾಗುತ್ತದೆ.

Related Posts