ಮಂಗಳೂರು ನಗರ ಹೊರವಲಯದ ಕೆ.ಸಿ.ರೋಡ್‌ನಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಡೆದ ದರೋಡೆ ಪ್ರಕರಣದ ಪ್ರಮುಖ ಆರೋಪಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಕನ್ಯಾನದ ಭಾಸ್ಕರ್ ಬೆಳ್ಚಪಾಡ ಯಾನೆ ಶಶಿ ತೇವರ್ (69) ಮತ್ತು ಕೆ.ಸಿ.ರೋಡ್‌ನ ಮೊಹಮ್ಮದ್ ನಝೀರ್ ಬಂಧಿತರು. ಜನವರಿ 17ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ.ರೋಡ್‌ನಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಪಿಸ್ತೂಲ್ ತೋರಿಸಿ ಒಳಬಂದ ಐವರು ದರೋಡೆಕೋರರು ಕೆ.ಜಿಗಟ್ಟಲೆ ಚಿನ್ನ ಮತ್ತು ನಗದು ದರೋಡೆ ಮಾಡಿದ್ದರು.
ಪೊಲೀಸರು ಆರೋಪಿಗಳು ದರೋಡೆಗೈದ ಚಿನ್ನಾಭರಣ ಮತ್ತು ಹಣವನ್ನು ವಶಪಡಿಸಿಕೊಂಡಿದ್ದು, ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ತನಿಖೆಯ ವೇಳೆ ನಿವಾಸಿ ಶಶಿ ತೇವರ್ ದರೋಡೆಗೆ ಸಂಚು ರೂಪಿಸಿದ್ದನ್ನು ಬಾಯಿಬಿಟ್ಟಿದ್ದರು. ಆದರೆ ಶಶಿ ತೇವರ್ ಯಾರು ಎಂಬುದು ಗೊತ್ತಾಗಿರಲಿಲ್ಲ. ತನಿಖೆ ಮುಂದುವರಿಸಿದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯಾದ ಭಾಸ್ಕರ್ ಬೆಳ್ಚಪಾಡ ಯಾನೆ ಶಶಿ ತೇವರ್ (69) ಎಂಬಾತನನ್ನು ಬೆಂಗಳೂರಿನ ರೈಲ್ವೆ ಸ್ಟೇಷನ್ ಬಳಿ ಬಂಧಿಸಿದ್ದಾರೆ. ಆತನನ್ನು ವಿಚಾರಿಸಿದಾಗ, ಏಳು ವರ್ಷಗಳಿಂದ ಸ್ಥಳೀಯ ವ್ಯಕ್ತಿ ಮೊಹಮ್ಮದ್ ನಝೀರ್ ಎಂಬಾತನೊಂದಿಗೆ ಸಂಪರ್ಕದಲ್ಲಿದ್ದು, ಕೋಟೆಕಾರ್ ಸಹಕಾರಿ ಸಂಘದಲ್ಲಿ ದರೋಡೆಗೆ 6 ತಿಂಗಳಿನಿಂದ ಇತರ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿದ್ದಾಗಿ ತಿಳಿಸಿದ್ದ. ಈ ಮಾಹಿತಿ ಆಧರಿಸಿ ಸ್ಥಳೀಯ ವ್ಯಕ್ತಿ ಮೊಹಮ್ಮದ್ ನಝೀರ್‌ನನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಭಾಸ್ಕರ್ ಬೆಳ್ಚಪಾಡನೊಂದಿಗೆ ಮೊಹಮ್ಮದ್ ನಝೀರ್ ಸಂಚಿನಲ್ಲಿ ಪಾಲ್ಗೊಂಡಿದ್ದ. ಕೋಟೆಕಾರ್ ಸಹಕಾರಿ ಸಂಘ ಕಟ್ಟಡವನ್ನು ಆರೋಪಿಗಳಿಗೆ ತೋರಿಸಿಕೊಟ್ಟು ಡಕಾಯತಿ ನಡೆಸಬೇಕಾದ ದಿನ, ಸಮಯ ಹಾಗೂ ಸೊಸೈಟಿಯಲ್ಲಿರುವ ಸಿಬ್ಬಂದಿ ಬಗ್ಗೆ ಮತ್ತು ಕೃತ್ಯದ ನಂತರ ತಪ್ಪಿಸಿಕೊಂಡು ಹೋಗುವ ಮಾರ್ಗ ಮುಂತಾದ ಸ್ಥಳೀಯ ಮಾಹಿತಿಯನ್ನೂ ತಿಳಿಸಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.