ಒಂದು ತಿಂಗಳಿಂದ ಪ್ರೇಯಸಿ ಮೆಸೇಜ್ ಹಾಗೂ ಕರೆಗೆ ಪ್ರತಿಕ್ರಿಯಿಸುತ್ತಿಲ್ಲವೆಂದು ನೊಂದು ಮಂಗಳೂರಿನ ಸೋಮೇಶ್ವರದ ಯುವಕನೊಬ್ಬ ಒಮನ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುನೀತ್ ಪೂಜಾರಿ (32) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಎಂದು ಗುರುತಿಸಲಾಗಿದೆ.
ಕಳೆದ ಒಂದೂವರೆ ವರ್ಷದಿಂದ ಒಮನ್‍ನ ಲಿಫ್ಟ್ ಕಂಪನಿಯಲ್ಲಿ ಪುನೀತ್ ಕೆಲಸ ಮಾಡಿಕೊಂಡಿದ್ದ. ನಾಲ್ಕು ವರ್ಷಗಳಿಂದ ಮಂಗಳೂರಿನ ಉರ್ವದ ಯುವತಿಯನ್ನು ಪ್ರೀತಿಸುತ್ತಿದ್ದ. ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದು, ಮರಳಿ ಒಮನ್‍ಗೆ ತೆರಳಿದ್ದ.
ಇತ್ತೀಚೆಗೆ ಪುನೀತ್‍ನ ಕರೆ, ಸಂದೇಶಗಳಿಗೆ ಪ್ರೀತಿಸುತ್ತಿದ್ದ ಯುವತಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ನೇಹಿತರೊಂದಿಗೆ ಮಾತನಾಡಿದ್ದ ಆತ, ಯುವತಿ ಪ್ರೀತಿ ನಿರಾಕರಿಸಿದ್ದಾಗಿ ಹೇಳಿಕೊಂಡಿದ್ದ. ಇದೇ ಕಾರಣಕ್ಕೆ ನೊಂದು ಸಾಮಾಜಿಕ ಜಾಲತಾಣದಲ್ಲಿ ಲೈವ್ ವೀಡಿಯೊ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.


