Menu

ಮಂಗಳೂರು ಮುಡಾ ಆಯುಕ್ತರಿಗೆ ಬ್ರೋಕರ್‌ಗಳಿಂದ ವಾಮಾಚಾರದ ಬೆದರಿಕೆ

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿರುವ ನೂರ್ ಝಹರಾ ಖಾನಂ ಅವರಿಗೆ ದಲ್ಲಾಳಿಗಳು ವಾಮಾಚಾರ ಪ್ರಯೋಗದ ಬೆದರಿಕೆ ಒಡ್ಡಿರುವುದಾಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಭ್ರಷ್ಟಾಚಾರ ಮತ್ತು ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಕ್ಕೆ ತನಗೆ ವಾಮಾಚಾರದ ಬೆದರಿಕೆಯೊಡ್ಡಿರುವುದಾಗಿ ಆಯುಕ್ತರು ಇಬ್ಬರು ದಲ್ಲಾಳಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಬ್ರೋಕರ್ ವಹಾಬ್ (45) ಮತ್ತು ಅಸಿಸ್ಟೆಂಟ್ ಬ್ರೋಕರ್ ಸಾಬಿತ್ (25) ವಿರುದ್ದ ಮೌಢ್ಯ ನಿರ್ಬಂಧ ಕಾಯ್ದೆ 2020ರ ಅಡಿ ಕೇಸು ದಾಖಲಿಸಬೇಕೆಂದು ಕಮಿಷನರ್ ದೂರು ನೀಡಿದ್ದರು. ಅದರಂತೆ ಉರ್ವ ಪೊಲೀಸರು ಬಿಎನ್​ಎಸ್ ಸೆಕ್ಷನ್ 132, 351, 356(1), 61(2), 352 ರಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದಲ್ಲಾಳಿಗಳು ಒಟ್ಟು ಸೇರಿ ವಾಟ್ಸ್​ಆ್ಯಪ್ ಗ್ರೂಪ್ ರಚಿಸಿ ಪ್ರಾಣ ಬೆದರಿಕೆ ಹಾಕಿ, ಅವಮಾನಕರ ಸಂದೇಶಗಳನ್ನು ಪ್ರಕಟಿಸಿದ್ದಾರೆ ಎಂದು ನೂರ್ ಝಹರಾ ಖಾನಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರವಾಣಿ ಮೂಲಕವೂ ಜೀವಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಗುಂಪು ಕಟ್ಟಿಕೊಂಡು ಮುಡಾ ಕಚೇರಿಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಮುಡಾ ಕಚೇರಿಯಲ್ಲಿ ಅಧಿಕಾರಿಯೊಬ್ಬರ ಚೇಂಬರ್​​ನಲ್ಲಿ ಬ್ರೋಕರ್ ಒಬ್ಬ ಕಡತ ತಿದ್ದುಪಡಿ ಮಾಡಿದ್ದ ವೀಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ ಕೂಡ ಆಗಿತ್ತು. ಬ್ರೋಕರ್ ಕಡತ ಪರಿಶೀಲಿಸಿ ಪೆನ್​ನಲ್ಲಿ ತಿದ್ದುವ ದೃಶ್ಯ ವೈರಲ್ ಆದ ಬೆನ್ನಲ್ಲೇ ಕಮಿಷನರ್ ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು.
ವೀಡಿಯೊ ವೈರಲ್ ಬೆನ್ನಲ್ಲೇ ಮುಡಾ ಕಚೇರಿಗೆ ದಲ್ಲಾಳಿಗಳಿಗೆ ನಿರ್ಬಂಧ ವಿಧಿಸಿ ಕಮಿಷನರ್ ಆದೇಶ ಹೊರಡಿಸಿದ್ದರು. ಖಾಸಗಿ ಭದ್ರತಾ ಸಿಬ್ಬಂದಿ ನೇಮಿಸಿ ಬ್ರೋಕರ್​ಗಳ ಮುಡಾ ಪ್ರವೇಶಕ್ಕೆ ತಡೆಯೊಡಿದ್ದರು. ಮುಡಾದಲ್ಲಿ ವೈಯಕ್ತಿಕ ಕೆಲಸ ಇರುವವರಿಗಷ್ಟೇ ಕಚೇರಿ ಪ್ರವೇಶಕ್ಕೆ ಅವಕಾಶ ಎಂದಿದ್ದರು. ಇದರಿಂದ ಕುಪಿತಗೊಂಡಿದ್ದ ಬ್ರೋಕರ್​ಗಳು ಬೆದರಿಕೆ ಹಾಕಿದ್ದಾರೆ.

Related Posts

Leave a Reply

Your email address will not be published. Required fields are marked *