Menu
12

75 ಕೋಟಿ ರೂ. ಬೆಲೆ ಬಾಳುವ ಮಾದಕ ದ್ರವ್ಯದೊಂದಿಗೆ ಮಹಿಳಾ ಆರೋಪಿಗಳ ಬಂಧಿಸಿದ ಮಂಗಳೂರು ಸಿಸಿಬಿ

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ನಗರ ಅಪರಾಧ ವಿಭಾಗವು ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ವಶಕ್ಕೆ ಪಡೆದುಕೊಂಡಿದೆ.

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ದಕ್ಷಿಣ ಅಫ್ರಿಕಾ ದೇಶದ ಮಹಿಳಾ ಪ್ರಜೆಗಳಿಬ್ಬರನ್ನು ಬಂಧಿಸಿದ ಕ್ರೈಂ ಬ್ರ್ಯಾಂಚ್‌ ವಿಭಾಗವು 75 ಕೋಟಿ ರೂ. ಮೊತ್ತದ 37.870 ಕೆಜಿ ಎಡಿಎಂಎ ವಶಪಡಿಸಿಕೊಂಡಿದ್ದಾಗಿ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ನಗರದ ಪಂಪ್‌ವೆಲ್ ಬಳಿಯ ಲಾಡ್ಜ್‌ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ಹೈದರ್ ಅಲಿ ಎಂಬಾತನನ್ನು ಬಂಧಿಸಿ, 15 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಆತನ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು, ಆತನಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ನೈಜೇರಿಯಾ ದೇಶದ ಪೀಟರ್ ಐಕೇಡಿ ಬೆಲೋನ್ವು ಎಂಬಾತನನ್ನು ಬಂಧಿಸಿ, 6.248 ಕೆಜಿ ಮಾದಕ ವಸ್ತು ಎಂಡಿಎಂಎ ಜಪ್ತಿ ಮಾಡಿದ್ದರು.

ನೈಜೀರಿಯಾ ಪ್ರಜೆಗೆ ಮಾದಕ ವಸ್ತು ಪೂರೈಕೆ ಮಾಡುವ ಪೆಡ್ಲರ್‌ಗಳ ಪತ್ತೆಗೆ ಆರು ತಿಂಗಳಿನಿಂದ ಮಂಗಳೂರು ಸಿಸಿಬಿ ಪೊಲೀಸರು ಕ್ರಿಯಾಶೀಲರಾಗಿದ್ದರು. ಪ್ರಕರಣದಲ್ಲಿ ದಿಲ್ಲಿಯಿಂದ ಬೆಂಗಳೂರಿಗೆ ಹಾಗೂ ದೇಶದ ಇತರ ಕಡೆಗಳಿಗೆ ಮಾದಕ ವಸ್ತು ಎಂಡಿಎಂಎ ಅನ್ನು ಬೃಹತ್ ಪ್ರಮಾಣದಲ್ಲಿ ವಿದೇಶಿ ಮಹಿಳಾ ಪ್ರಜೆಗಳು ವಿಮಾನ ಮಾರ್ಗದಲ್ಲಿ ಸಾಗಿಸುವ ಮಾಹಿತಿ ಲಭಿಸಿತ್ತು. ಆರೋಪಿಗಳು ದಿಲ್ಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಬಳಿಕ ದಸ್ತಗಿರಿ ಮಾಡಲು ಮಂಗಳೂರು ಸಿಸಿಬಿ ಪೊಲೀಸರ ತಂಡ ಬೆಂಗಳೂರಿಗೆ ತೆರಳಿ ಪತ್ತೆ ಕಾರ್ಯದಲ್ಲಿ ತೊಡಗಿತ್ತು.

ದಿಲ್ಲಿಯಿಂದ ವಿಮಾನದಲ್ಲಿ ಬಂದಿದ್ದ ದಕ್ಷಿಣ ಅಫ್ರಿಕಾ ದೇಶದ ಇಬ್ಬರು ಮಹಿಳಾ ಪ್ರಜೆಗಳಾದ ಬಂಬಾ ಫಾಂಟಾ ಯಾನೆ ಅಡೋನಿಸ್ ಜುಬುಲಿಲೆ(31) ಮತ್ತು ಅಬಿಗೈಲ್ ಅಡೋನಿಸ್(30) ಎಂಬವರನ್ನು ಎಲೆಕ್ಟ್ರಾನಿಕ್ ಸಿಟಿ ಹತ್ತಿರದ ನೀಲಾದ್ರಿ ನಗರ ಎಂಬಲ್ಲಿ ವಶಕ್ಕೆ ಪಡೆದುಕೊಂಡು, ಎರಡು ಟ್ರಾಲಿ ಟ್ರಾವೆಲ್ ಬ್ಯಾಗ್‌ನಲ್ಲಿದ್ದ 75 ಕೋಟಿ ಮೌಲ್ಯದ 37.878 ಕೆಜಿ ಎಂಡಿಎಂಎ, 4 ಮೊಬೈಲ್ ಫೋನುಗಳು, ಟ್ರಾಲಿ ಬ್ಯಾಗ್ ಗಳು-2, ಪಾಸ್‌ಪೋರ್ಟ್- 2, ನಗದು ಹಣ 18,460 ರೂ. ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ದಿಲ್ಲಿಯಿಂದ ಮಾದಕ ವಸ್ತು ಎಂಡಿಎಂಎ ಅನ್ನು ವಿಮಾನದಲ್ಲಿ ಬೆಂಗಳೂರು ಹಾಗೂ ಇತರ ಕಡೆಗಳಿಗೆ ಸಾಗಾಟ ಮಾಡಿಕೊಂಡು ನೈಜೀರಿಯನ್ ಪ್ರಜೆಗಳಿಗೆ ಹಾಗೂ ಇತರರಿಗೆ ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಿ ಹಣಸಂಪಾದಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದರು ಎಂದು ಕಮೀಷನರ್ ವಿವರಿಸಿ ದರು.

Related Posts

Leave a Reply

Your email address will not be published. Required fields are marked *