ಹಣಕಾಸು ವಿಚಾರಕ್ಕೆ ಮಂಗಳಮುಖಿ ಮತ್ತು ಪ್ರಿಯತಮನ ಮಧ್ಯೆ ಶುರುವಾದ ಜಗಳ ಅವರಿಬ್ಬರ ಆತ್ಮಹತ್ಯೆಯಲ್ಲಿ ಕೊನೆಯಾಗಿರುವ ಪ್ರಕರಣ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಮೇದಾರ ಕೇತಯ್ಯ ನಗರದಲ್ಲಿನ ಬಾಡಿಗೆ ಮನೆಯೊಂದರಲ್ಲಿ ಮಂಗಳಮುಖಿ ಸುಹಾಸಿನಿ (29) ಹಾಗೂ ಪ್ರಿಯಕರ ಶೇಖರ್ (27) ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮೇಲ್ನೋಟಕ್ಕೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಂದಾಜಿಸಲಾಗಿತ್ತು, ತನಿಖೆ ಮುಂದುವರಿದಂತೆ ಮಂಗಳಮುಖಿ ಸುಹಾಸಿನಿಯನ್ನು ಕೊಲೆ ಮಾಡಿ ನಂತರ ಶೇಖರ್ ಆತ್ಮಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದ ಸುಹಾಸಿನಿ ಮಂಗಳಮುಖಿಯಾದ ಬಳಿಕ ಆರು ವರ್ಷಗಳಿಂದ ಕುಟುಂಬದಿಂದ ದೂರವಾಗಿ ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮದ ಶೇಖರ್‌ನನ್ನು ಪ್ರೀತಿಸಿ ಹೊಸಪೇಟೆಯಲ್ಲಿ ಒಟ್ಟಿಗೆ ಜೀವನ ನಡೆಸುತ್ತಿದ್ದರು. ಸುಹಾಸಿನಿ ತನ್ನ ದುಡಿಮೆಯಿಂದ ಆತನಿಗೆ ಆಟೋ ಕೊಡಿಸಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಸಣ್ಣಪುಟ್ಟ ಜಗಳಗಳು ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರತಿ ಮಂಗಳವಾರ ಬಳ್ಳಾರಿಯ ದುರ್ಗಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದ ಈ ಜೋಡಿ ಹಂಪಿ ಉತ್ಸವದಲ್ಲಿ ಭಿಕ್ಷೆ ಬೇಡಿದ ಬಳಿಕ ಸೋಮವಾರ ಬಳ್ಳಾರಿಗೆ ವಾಪಸಾಗಿ ರೂಢಿಯಂತೆ ಮೇದಾರ ಕೇತಯ್ಯ ನಗರದಲ್ಲಿನ ಬಾಡಿಗೆ ಮನೆಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಮನೆಯೊಳಗೆ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಘಟನೆಯ ನಿಖರ ಹಿನ್ನೆಲೆ ಹಾಗೂ ಕಾರಣಗಳು ಮರಣೋತ್ತರ ಪರೀಕ್ಷೆ ಮತ್ತು ತನಿಖೆಯ ಬಳಿಕವೇ ಸಿಗಬೇಕಿದೆ ಎಂದು ಪಲೀಸರು ತಿಳಿಸಿದ್ದಾರೆ. ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುತ್ತಮುತ್ತಲವರ ಹೇಳಿಕೆ, ಮೊಬೈಲ್ ಕರೆ ವಿವರಗಳು ಹಾಗೂ ಹಣಕಾಸಿನ ವ್ಯವಹಾರಗಳನ್ನೂ ಪರಿಶೀಲಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.


