ಮಹಿಳೆಯರೂ ಯಾಂತ್ರೀಕೃತವಾಗಿ ಭತ್ತ ನಾಟಿ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಡುವುದಕ್ಕಾಗಿ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಒ ನಂದಿನಿ ಕೆ.ಆರ್. ಸ್ವತಃ ಯಾಂತ್ರೀಕೃತ ವಿಧಾನದ ಮೂಲಕ ಭತ್ತ ನಾಟಿ ಮಾಡಿದರು.
ಹೊಳಲು ಗ್ರಾಮದ ದಕ್ಷ ಯಂತ್ರ ನಾಟಿ ಸಸಿಮಡಿ ತಯಾರಿಕಾ ಘಟಕದಲ್ಲಿ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ ನೀಡಿದ ಜಿಪಂ ಸಿಇಒ ನಂದಿನಿ, ಯಂತ್ರಗಳ ಮೂಲಕ ಭತ್ತ ನಾಟಿ ಮಾಡಲು ಮಹಿಳೆಯರಿಗೆ ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಮತ್ತು ಯಂತ್ರವನ್ನು ನಿರ್ವಹಣೆ ಮಾಡಬಹುದು ಎಂದು ಅವರಿಗೆ ವಿಶ್ವಾಸ ತುಂಬುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.
ಯಾಂತ್ರೀಕೃತ ವಿಧಾನದ ಭತ್ತ ನಾಟಿಗೆ ಸಸಿಮಡಿಗಳನ್ನು ತಯಾರಿಸುವ ವಿಧಾನದ ಬಗ್ಗೆ ಮಹಿಳಾ ಸ್ವ-ಸಹಾಯ ಸಂಘಗಳಿಗೆ ತರಬೇತಿ ನೀಡಿ, ಅವರಿಂದ ರೈತರಿಗೆ ಉತ್ತಮ ಗುಣಮಟ್ಟದ ಭತ್ತದ ಸಸಿಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ಈ ನಿಟ್ಟಿನಲ್ಲಿ ತರಬೇತಿ ಏರ್ಪಡಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಭತ್ತ ನಾಟಿಗೆ ಕೃಷಿ ಕೂಲಿಕಾರರು ಸರಿಯಾದ ಸಮಯದಲ್ಲಿ ದೊರೆಯುತ್ತಿಲ್ಲ, ಇದರಿಂದ ಸರಿಯಾದ ಸಮಯದಲ್ಲಿ ನಾಟಿ ಮಾಡಲು ಸಾಧ್ಯವಾಗದೇ ಇಳುವರಿ ಕಡಿಮೆಯಾ ಗುತ್ತಿದೆ. ಯಾಂತ್ರೀಕೃತ ವಿಧಾನದ ಭತ್ತ ನಾಟಿಯಿಂದ ಭತ್ತ ನಾಟಿಯ ವೆಚ್ಚ ತಗ್ಗಿಸಬಹುದಾಗಿದೆ ಹಾಗೂ ಕಡಿಮೆ ಸಮಯದಲ್ಲಿ ನಾಟಿ ಮಾಡಬಹುದಾಗಿದೆ ಎಂದು ನಂದಿನಿ ಕೆ.ಆರ್. ಹೇಳಿದರು.
ಜಿಲ್ಲಾ ಪಂಚಾಯತ್, ಮಂಡ್ಯ ಮತ್ತು ಕೃಷಿ ಇಲಾಖೆ ಮಂಡ್ಯ ವತಿಯಿಂದ ಹೊಳಲು ಗ್ರಾಮದ ದಕ್ಷ ಯಂತ್ರ ನಾಟಿ ಸಸಿಮಡಿ ತಯಾರಿಕಾ ಘಟಕದಲ್ಲಿ ಯಾಂತ್ರೀಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆ ಇದಾಗಿತ್ತು.
ಕೃಷಿ ಇಲಾಖೆಯ ಸಮನ್ವಯದೊಂದಿಗೆ, ಮಂಡ್ಯ ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ನೋಂದಾಯಿತ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಒಂಟಿ ಕಣ್ಣಿನ ಕಬ್ಬಿನ ಸಸಿ ಮಡಿ ತಯಾರಿಸುವುದು ಹಾಗೂ ಯಂತ್ರ ನಾಟಿ ಸಸಿಮಡಿ ತಯಾರಿಸುವ ಕುರಿತಂತೆ ಒಂದು ದಿನದ ತರಬೇತಿ ನೀಡಲಾಯಿತು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್, ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಹರ್ಷ ಸೇರಿದಂತೆ ಇತರ ಅಧಿಕಾರಿಗಳು ಹಾಹರಿದ್ದರು.