ಮಂಡ್ಯದ ಕೆ.ಆರ್.ಪೇಟೆಯ ಕಾಳೇನಹಳ್ಳಿ ಗ್ರಾಮದಲ್ಲಿ ನೋಟಿಸ್ ಕೊಡಲು ಬಂದ ಕೋರ್ಟ್ ಸಿಬ್ಬಂದಿ ಕಣ್ಣಿಗೆ ಮಹಿಳೆ ಖಾರದಪುಡಿ ಎರಚಿದ ಘಟನೆ ನಡೆದಿದೆ. ಅಪಘಾತ ಪ್ರಕರಣ ಸಂಬಂಧ ನೋಟೀಸ್ ಕೊಡಲು ಹೋಗಿದ್ದ ಕೋರ್ಟ್ ಸಿಬ್ಬಂದಿಗೆ ಮಹಿಳೆ ಖಾರದ ಪುಡಿ ಎರಚಿರುವ ವೀಡಿಯೊ ಮೊಬೈಲ್ ನಲ್ಲಿ ಸೆರೆಯಾಗಿದೆ.
ಕೆ.ಆರ್.ಪೇಟೆ ಸಿವಿಲ್ ಕೋರ್ಟ್ ಸಿಬ್ಬಂದಿ ಶಂಕರೇಗೌಡರ ಕಣ್ಣಿಗೆ ಸಾಕಮ್ಮ ಎಂಬ ಮಹಿಳೆ ಖಾರದ ಪುಡಿ ಎರಚಿದ್ದಾರೆ. ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಪೊಲೀಸರಿಗೂ ಮಾಹಿತಿ ನೀಡದೆ ವಾಹನ ಮಾಲೀಕನ ಜೊತೆ ನೇರವಾಗಿ ಕೋರ್ಟ್ ಸಿಬ್ಬಂದಿ ಮನೆ ಬಳಿ ಹೋಗಿದ್ದರು ಎಂದು ಹೇಳಲಾಗಿದೆ.
ಚಿಕ್ಕಮಗಳೂರಿನಲ್ಲಿ ನಡೆದಿದ್ದ ಅಪಘಾತ ಪ್ರಕರಣ ಸಂಬಂಧ ನೋಟಿಸ್ ನೀಡಲು ಸಿಬ್ಬಂದಿ ಮನೆಗೆ ಹೋಗಿದ್ದರು. ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.
ಭತ್ತದ ಪೈರಿಗೆ ಕಳೆನಾಶಕ ಸಿಂಪಡಿಸಿದ ಕಿಡಿಗೇಡಿಗಳು
ಮಂಡ್ಯದ ನಾಗಮಂಗಲ ತಾಲೂಕಿನ ಬಿಂಡೇನಹಳ್ಳಿ ಗ್ರಾಮದ ಗದ್ದೆಯಲ್ಲಿ ನಾಟಿ ಮಾಡಿದ ಗದ್ದೆಗೆ ಕಿಡಿಗೇಡಿಗಳು ಕ್ರಿಮಿನಾಶಕ ಸಿಂಪಡಿಸಿದ್ದರಿಂದ ಭತ್ತದ ಪೈರು ಸಂಪೂರ್ಣ ನಾಶವಾಗಿದೆ. ಭತ್ತದ ಬೆಳೆ ಕಳೆದುಕೊಂಡು ರೈತ ಕುಳ್ಳೇಗೌಡ ಗೋಳಾಡುತ್ತಿದ್ದಾರೆ. 15 ದಿನಗಳ ಹಿಂದೆ ಗದ್ದೆಯಲ್ಲಿ ನಾಟಿ ಮಾಡಲಾಗಿತ್ತು. ಹಳೆ ದ್ವೇಷಕ್ಕೆ ಗ್ರಾಮದ ಕಿಡಿಗೇಡಿಗಳು ಕ್ರಿಮಿನಾಶಕ ಸಿಂಪಡಿಸಿ ಬೆಳೆ ನಾಶಪಡಿಸಿದ್ದಾರೆ ಎಂದು ರyತ ಕುಳ್ಳೇಗೌಡ ಆರೋಪಿಸಿದ್ದಾರೆ.
ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿರುವ ನೊಂದ ರೈತ ಕುಟುಂಬ ಪರಿಹಾರ ನೀಡುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಿದೆ. ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.