ಬೀದಿ ನಾಯಿಗಳಿಗೆ ಶಾಶ್ವತ ಆಶ್ರಯ ತಾಣ ರೂಪಿಸಿ ಸ್ಥಳಾಂತರಿಸಬೇಕೆಂಬ ತನ್ನ ಆದೇಶದಲ್ಲಿ ಸುಪ್ರೀಂಕೋರ್ಟ್ ತಿದ್ದುಪಡಿ ತಂದಿದೆ. ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ಅವುಗಳನ್ನು ಬಿಡಬೇಕು, ಆಕ್ರಮಣಕಾರಿ, ಅನಾರೋಗ್ಯ ಇರುವ ನಾಯಿಗಳನ್ನು ಮಾತ್ರ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕೆಂದು ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ವಿಕ್ರಮ್ ನಾಥ್, ನ್ಯಾ. ಸಂದೀಪ್ ಮೆಹ್ತಾ ಮತ್ತು ನ್ಯಾ. ಎನ್.ವಿ ಅಂಜಾರಿಯಾ ನೇತೃತ್ವದ ತ್ರಿಸದಸ್ಯ ಪೀಠವು ಈ ಆದೇಶ ಪ್ರಕಟಿಸಿ ಆಗಸ್ಟ್ 11ರಂದು ಹೊರಡಿಸಿದ್ದ ತೀರ್ಪಿನಲ್ಲಿ ತಿದ್ದುಪಡಿ ಮಾಡಿದೆ. ನ್ಯಾ. ಪಾರ್ದಿವಾಲಾ ಪೀಠ ನೀಡಿದ್ದ ಆದೇಶಕ್ಕೆ ನಾಯಿಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಪ್ರಕರಣದ ವಿಚಾರಣೆಯನ್ನ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿತ್ತು.
ಬೀದಿ ನಾಯಿಗಳನ್ನು ಶಾಶ್ವತವಾಗಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂದಿದ್ದ ಸುಪ್ರೀಂಕೋರ್ಟ್ ಈಗ ಅನಾರೋಗ್ಯ ಮತ್ತು ಆಕ್ರಮಣಕಾರಿ ಬೀದಿ ನಾಯಿಗಳನ್ನು ಮಾತ್ರ ಆಶ್ರಯ ತಾಣಗಳಲ್ಲಿ ಇರಿಸಿ ಉಳಿದ ನಾಯಿಗಳ ಸಂತಾನಹರಣ ಚಿಕಿತ್ಸೆ, ಜಂತುಹುಳು ನಿವಾರಣಾ ಲಸಿಕೆ ಹಾಕಿದ ಬಳಿಕ ಬಿಡುವಂತೆ ತಿಳಿಸಿದೆ.
ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡುವುದಕ್ಕೆ ಸುಪ್ರೀಂ ನಿಷೇಧ ಹೇರಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ. ಸಾರ್ವಜನಿಕವಾಗಿ ಅವುಗಳಿಗೆ ಆಹಾರ ನೀಡುವುದಕ್ಕೆ ಅನುಮತಿಯಿಲ್ಲ, ಪ್ರತ್ಯೇಕ ಆಹಾರ ಸ್ಥಳಗಳನ್ನು ವ್ಯವಸ್ಥೆಗೊಳಿಸಿದ ಕಡೆ ಮಾತ್ರ ಆಹಾರ ನೀಡಬೇಕು ಎಂದು ಕೋರ್ಟ್ ಹೇಳಿದೆ.
ನಾಯಿಗಳನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಕೋರ್ಟ್, ದತ್ತು ಪಡೆದ ನಾಯಿಗಳನ್ನು ಮರಳಿ ಬೀದಿಗಳಿಗೆ ಹಿಂತಿರುಗಿಸದಂತೆ ನೋಡಿಕೊಳ್ಳಬೇಕು. ಪ್ರತಿ ಅರ್ಜಿದಾರ 25,000 ರೂ. ಮತ್ತು ಎನ್‌ಜಿಒಗಳು 2 ಲಕ್ಷ ರೂ. ಠೇವಣಿ ಇಡಬೇಕು ಎಂದು ನಿರ್ದೇಶಿಸಿ, ಈ ಕುರಿತು ರಾಷ್ಟ್ರೀಯ ನೀತಿ ರೂಪಿಸಲು ಸೂಚಿಸಿದೆ.