ಮಧುಗಿರಿ ತಾಲೂಕಿನಲ್ಲಿ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಮಧು (38) ಎಂಬ ವ್ಯಕ್ತಿ ಬೈಕ್ ಸಮೇತ ಶವವಾಗಿ ಪತ್ತೆಯಾಗಿದ್ದಾರೆ. ಮಧುಗಿರಿಯ ಹೊಸಕೆರೆ-ನೇರಳೆಕೆರೆ ರಸ್ತೆಯಲ್ಲಿರುವ ಲಕ್ಷ್ಮೀದೇವಿಪುರ ಗ್ರಾಮದ ಬಳಿ ಮೃತದೇಹ ಪತ್ತೆಯಾಗಿದೆ.
ಇವರು ಕಾಣೆಯಾಗಿದ್ದ ಬಗ್ಗೆ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಸ್ತೆಯಲ್ಲಿರುವ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯಿಂದ ಕೆಳಗೆ ಬಿದ್ದು ಮಧು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಜಾಗದಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಪಘಾತದಿಂದ ಸಾವು ಸಂಭವಿಸುತ್ತಿದ್ದರೂ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಧುಗಿರಿ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಇದು ನಿಜವಾಗಿಯೂ ಅಪಘಾತವೇ ಅಥವಾ ಕೊಲೆಯೇ ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.


