ಅಪಘಾತಕ್ಕೊಳಗಾಗಿದ್ದ ಕ್ರಿಕೆಟಿಗ ರಿಷಭ್ ಪಂತ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದ ಯುವಕ ಗೆಳತಿ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಯುವತಿ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮುಜಾಫರ್ ನಗರದ ಬುಚ್ಚಾ ಬಸ್ತಿ ಗ್ರಾಮದಲ್ಲಿ ರಜತ್ ಕುಮಾರ್ (25) ಹಾಗೂ ಗೆಳತಿ ಮನು ಕಶ್ಯಪ್ (21) ಆತ್ಮಹತ್ಯೆಗೆ ಯತ್ನಿಸಿದ್ದು, ಗೆಳತಿ ಮೃತಪಟ್ಟಿದ್ದಾಳೆ. ರಜತ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ.
ಪ್ರೇಮಿಗಳ ಜಾತಿ ಬೇರೆ ಬೇರೆ ಆಗಿದ್ದು, ಎರಡೂ ಕುಟುಂಬಗಳು ಮದುವೆಗೆ ನಿರಾಕರಿಸಿದ್ದರು. ಅಲ್ಲದೇ ಬೇರೋಬ್ಬರ ಜೊತೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಇದರಿಂದ ನೊಂದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮನು ಕಶ್ಯಪ್ ತಾಯಿ ಮಗಳನ್ನು ರಜತ್ ಕಿಡ್ನಾಪ್ ಮಾಡಿ ವಿಷ ಹಾಕಿ ಕೊಂದಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
೨೦೨೨ರಲ್ಲಿ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದ ರಿಷಭ್ ಪಂತ್ ಅವರನ್ನು ರಜತ್ ಕುಮಾರ್ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದ. ಚೇತರಿಸಿಕೊಂಡ ನಂತರ ಪಂತ್ ಅವರನ್ನು ಕರೆದು ಸನ್ಮಾನಿಸಿದ್ದರು. ಅಲ್ಲದೇ ಅವರ ಸಾಹಸಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.
ಉತ್ತರಾಖಂಡ್ ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರಿಷಭ್ ಪಂತ್ ಅಪಘಾತಕ್ಕೆ ಒಳಗಾಗಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರಜತ್ ಮತ್ತು ಸ್ನೇಹಿತ ಕೂಡಲೇ ಕಾರಿನ ಬಳಿ ಧಾವಿಸಿ ಪಂತ್ ಅವರನ್ನು ನಜ್ಜುಗುಜ್ಜಾದ ಕಾರಿನಿಂದ ರಕ್ಷಿಸಿದ್ದರು. ಈ ಸಾಹಸಕ್ಕಾಗಿ ಪಂತ್ ಇಬ್ಬರಿಗೂ ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡಿದ್ದರು.