ಉತ್ತರ ಪ್ರದೇಶದಲ್ಲಿ ಬುರ್ಖಾ ಧರಿಸದೆ ಮನೆಯಿಂದ ಹೊರಬಂದಿದ್ದಕ್ಕೆ ವ್ಯಕ್ತಿಯೊಬ್ಬ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ಶೌಚಾಲಯದ ಗುಂಡಿಯೊಳಗೆ ಹೂತುಹಾಕಿರುವ ಪ್ರಕರಣ ಬಹಿರಂಗಗೊಂಡಿದೆ.
ಪತ್ನಿ ಬುರ್ಖಾ ಧರಿಸದೆ ಹೊರಗೆ ಹೊರಟಿದ್ದಕ್ಕೆ ಆರಂಭವಾದ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಫಾರೂಕ್ ಮೂವರನ್ನು ಕೊಲೆ ಮಾಡಿ ಹೂತುಹಾಕಿರುವ ಆರೋಪಿ.
ಪತ್ನಿ ತಾಹಿರಾ ಮತ್ತು ಪುತ್ರಿಯರಾದ ಅಫ್ರೀನ್ ಮತ್ತು ಸಹ್ರೀನ್ ಕಾಣೆಯಾಗಿ ಐದು ದಿನಗಳ ನಂತರ ಫಾರೂಕ್ ತಂದೆ ದಾವೂದ್ ಎಫ್ಐಆರ್ ದಾಖಲಿಸಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಫಾರೂಕ್ ಹೇಳಿಕೆಗಳಿಂದ ಅನುಮಾನವುಂಟಾಗಿ ವಿಚಾರಣೆ ತೀವ್ರಗೊಳಿಸಿದ್ದರು.
ಕೊನೆಗೆ ಹೆಂಡತಿ ಮತ್ತು ಹಿರಿಯ ಮಗಳನ್ನು ಗುಂಡು ಹಾರಿಸಿ, ಕಿರಿಯ ಮಗಳನ್ನು ಕತ್ತು ಹಿಸುಕಿ ಕೊಂದು ಶೌಚಾಲಯಕ್ಕಾಗಿ ಅಗೆದ ಗುಂಡಿಯಲ್ಲಿ ಶವಗಳನ್ನು ಹೂತಿಟ್ಟಿದ್ದಾಗಿ ಬಾಯ್ಬಿಟ್ಟಿದ್ದಾನೆ. ಪೊಲೀಸರು ಶವಗಳನ್ನು ಹೊರ ತೆಗೆದ ಬಳಿಕ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಬಟ್ಟೆಗೆ ಸಂಬಂಧಿಸಿದ ಇಷ್ಟು ಸಣ್ಣ ವಿಚಾರವೊಂದು ಮೂವರ ಕೊಲೆಗೆ ಕಾರಣವಾಗಿಎರುವ ಬಗ್ಗೆ ತೀವ್ರ ಬೇಸರ, ಅಸಮಾಧಾನ, ಟೀಕೆ ವ್ಯಕ್ತವಾಗಿದೆ.


