ಬೆಂಗಳೂರಿನ ಹುಳಿಮಾವು ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್ ಹರಿದ ಪರಿಣಾಮ ಯುವಕ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ನಡೆದಿದ್ದು, ರಾತ್ರಿ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಲ್ಲಕ್ಕಿಗಳನ್ನು ನೋಡುತ್ತಾ ನಿಂತಿದ್ದ ಯುವಕ ಅಕ್ಷತ್ (27) ಮೇಲೆ ಟ್ರ್ಯಾಕ್ಟರ್ ಹರಿದಿದ್ದು, ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ಮಾರ್ಗ ಮಧ್ಯೆಯೇ ಅಸು ನೀಗಿದ್ದಾರೆ.
ಬನಶಂಕರಿ ನಿವಾಸಿ ಅಕ್ಷತ್, ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಮದುವೆಯ ಅಹ್ವಾನ ಪತ್ರಿಕೆ ನೀಡಲೆಂದು ಬಂದಿದ್ದರು. ಜಾತ್ರೆ ನೋಡಿ ಹೋಗೊಣ ಎಂದು ಅಲ್ಲಿಯೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಹುಳಿಮಾವು ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬೆಂಗಳೂರು ದಕ್ಷಿಣ ಸಂಚಾರ ಡಿಸಿಪಿ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರ್ಘಟನೆಯಲ್ಲಿ ಯುವಕ ಮೃತಪಟ್ಟಿದ್ದರೂ ದೇವಾಲಯದ ಟ್ರಸ್ಟಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


