ಕೌಟುಂಬಿಕ ಕಲಹದ ಹಿನ್ನೆಲೆ ಗಂಡ ಹೆಂಡತಿಯ ಜಗಳ ಬಿಡಿಸಲು ಹೋದ ವ್ಯಕ್ತಿಗೆ ಮಚ್ಚಿನೇಟು ಬಿದ್ದು ಪ್ರಾಣ ಹೋಗಿರುವ ಘಟನೆ ಚಿತ್ರದುರ್ಗದ ಬುದ್ಧ ವೃತ್ತದಲ್ಲಿ ನಡೆದಿದೆ.
ಕೌಟುಂಬಿಕ ಕಲಹದ ಹಿನ್ನೆಲೆ ಸ್ಟೇಡಿಯಂ ರಸ್ತೆಯಲ್ಲಿನ ಬುದ್ಧ ವೃತ್ತದಲ್ಲಿ ಸಾಧಿಕ್‌ವುಲ್ಲಾ ಎಂಬಾತ ಪತ್ನಿಯೊಂದಿಗೆ ನಡುರಸ್ತೆಯಲ್ಲಿ ಜಗಳವಾಡುತ್ತಿದ್ದ. ಈ ವೇಳೆ ಜಗಳ ಬಿಡಿಸಲು ಮುಂದಾದ ತಾಜ್‌ಪೀರ್ (42) ಮೇಲೆ ಸಾಧಿಕ್‌ವುಲ್ಲಾ ಮಚ್ಚಿನಿಂದ ಹಲ್ಲೆ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ತಾಜ್‌ಪೀರ್ ಅಸು ನೀಗಿದ್ದಾರೆ.
ಈ ವೇಳೆ ಸಾಧಿಕ್‌ವುಲ್ಲಾ ಹಾಗೂ ತಾಜ್‌ಪೀರ್ ಮಧ್ಯೆ ನಡೆದ ಗಲಾಟೆಯ ವೀಡಿಯೊ ವೈರಲ್ ಆಗಿದೆ. ಆರೋಪಿ ಸಾಧಿಕ್‌ವುಲ್ಲಾನನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆಸ್ತಿ ಜಗಳ: ಅಣ್ಣ ಕೊಲೆಗೈದ ತಮ್ಮ
ಆಸ್ತಿ ಜಗಳದಲ್ಲಿ ಸಂಬಂಧಿ ಜೊತೆ ಸೇರಿ ತಮ್ಮನೊಬ್ಬ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ವಿಜಯನಗರದ ಹರಪ್ಪನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಹಗರಿಶಿರಹಳ್ಳಿ ಗ್ರಾಮದ ಮರುಳಸಿದ್ದೇಶ್ (26) ಕೊಲೆಯಾದವರು. ಮರುಳಸಿದ್ದೇಶ್ ತಮ್ಮ ಪತ್ರಿಗೌಡ (24) ಹಾಗೂ ಸಂಬಂಧಿ ನಾರಪ್ಪ (29) ಕೊಲೆ ಆರೋಪಿಗಳು.
ಪತ್ರಿಗೌಡ ಮದ್ಯ ವ್ಯಸನಿಯಾಗಿದ್ದು, ಆಸ್ತಿಯಲ್ಲಿ ಪಾಲು ಬೇಕು ಎಂದು ತಾಯಿ ಜೊತೆ ಕೆಲವು ದಿನಗಳಿಂದ ಜಗಳ ಮಾಡುತ್ತಿದ್ದ. ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ಜಗಳ ಮಾಡಿದ್ದ. ಬಳಿಕ ಇಡೀ ಆಸ್ತಿ ತನಗೆ ಸೇರುತ್ತದೆಂದು ಸಂಬಂಧಿ ಜೊತೆ ಸೇರಿ ಅಣ್ಣನ ಕೊಲೆ ಮಾಡಿದ್ದಾನೆ.
ಟವೆಲ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾಗಿ ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದರು. ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ತಾಯಿ ಕೊಲೆ ಕೇಸ್ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.


