Menu

ಬೆಂಗಳೂರಿನ ಕಲ್ಯಾಣ ಮಂಟಪಕ್ಕೆ ನುಗ್ಗಿ ವಧುವಿನ ಚಿನ್ನ ಕದ್ದಾತ ಅರೆಸ್ಟ್‌

ಬೆಂಗಳೂರಿನ ಕಲ್ಯಾಣ ಮಂಟಪಕ್ಕೆ ನುಗ್ಗಿ ನಕಲಿ ಕೀ ಬಳಿಸಿ ವಧುವಿನ ಕೊಠಡಿ ಪ್ರವೇಶಿಸಿ ಸೂಟ್ ಕೇಸ್​ನಲ್ಲಿಟ್ಟಿದ್ದ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದ ಅರೋಪಿಯನ್ನು  ನೆಲಮಂಗಲ ಟೌನ್ ಪೊಲೀಸರು  ಬಂಧಿಸಿದ್ದಾರೆ. ದಾವಣಗೆರೆ ಮೂಲದ ಕಿರಣ್ ಅಲಿಯಾಸ್ ಚೌಲ್ಟ್ರಿ ಕಿರಣ್ (25) ಬಂಧಿತ ಆರೋಪಿ.  ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆನೀಡಲಾಗಿದೆ.

ಮೇ 14 ಮತ್ತು 15 ರಂದು ನಗರದ ಎಂವಿಎಂ ಕಲ್ಯಾಣ ಮಂಟಪದಲ್ಲಿ ಉದ್ಯಮಿ ವೆಂಕಟೇಶ್ ಅವರ ಮಗಳ ಮದುವೆ  ನಡೆದಿತ್ತು. ತಮ್ಮನ ಮಗಳು ನಯನಾ  ಕಲ್ಯಾಣ ಮಂಟಪದಲ್ಲಿನ ವಧುವಿನ ಕೊಠಡಿಯಲ್ಲಿನ ಸೂಟ್ ಕೇಸ್​ನಲ್ಲಿ ಸಮಾರು 3.5 ಲಕ್ಷ ಮೌಲ್ಯದ 40 ಗ್ರಾಂ ತೂಕದ ಚಿನ್ನದ ಚೈನ್ ಇಟ್ಟು ಮದುವೆ ಕಾರ್ಯದಲ್ಲಿ  ತೊಡಗಿದ್ದರು.

ಮದುವೆ ಮುಗಿದ ನಂತರ ಮನೆಗೆ ಬಂದು ಸೂಟ್ ಕೇಸ್ ಪರಿಶೀಲನೆ ಮಾಡಿದಾಗ ಚಿನ್ನದ ಚೈನ್ ಕಳವಾಗಿರುವುದು ಬೆಳಕಿಗೆ ಬಂದಿತ್ತು. ವೆಂಕಟೇಶ್‌  ಮೇ 15ರಂದು ಈ ಬಗ್ಗೆ ನೆಲಮಂಗಲ ಟೌನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಟೌನ್ ಪೊಲೀಸರು ಮಂಟಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕಿದೆ. ನಕಲಿ ಕೀ ಬಳಸಿ ಹೆಣ್ಣಿನ ಕೊಠಡಿಗೆ ಹೋಗಿ ಬರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಪತ್ತೆಯಾಗಿತ್ತು. ಮೇ 16 ರಂದು ಆರಕ್ಷಕ ನಿರೀಕ್ಷಕ ಭರತ್‌ ಗೌಡ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಎಎಸ್‌ಐ ರಘು ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ದಾವಣಗೆರೆಯಲ್ಲಿ ಕಳ್ಳ ಕಿರಣ್ ಅಲಿಯಾಸ್ ಚೌಲ್ಟ್ರಿ ಕಿರಣ್​ನನ್ನು ಬಂಧಿಸಿದ್ದಾರೆ. ಬಂಧಿತನಿಂದ 3.5 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, ಜಪ್ತಿ ಮಾಡಲಾದ 40 ಗ್ರಾಂ ತೂಕದ ಚಿನ್ನದ ಸರವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಕಿರಣ್‌ ಮೋಜು ಮಸ್ತಿಗಾಗಿ ಕಳ್ಳತನ ನಡೆಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.  ಕಲ್ಯಾಣ ಮಂಟಪದ ವಧುವಿನ ಕೊಠಡಿಯಲ್ಲಿಟ್ಟಿದ್ದ ಬೆಲೆ ಬಾಳುವ ಚಿನ್ನಾಭರಣಗಳನ್ನ ಕದ್ದು ಮಾರಾಟ ಮಾಡಿದ್ದ ಕಿರಣ್​, ಅದರಿಂದ ಬಂದ ಹಣದಲ್ಲಿ ಮೋಜು ಮಸ್ತಿ ಮಾಡಿದ್ದ. ಕಲ್ಯಾಣ ಮಂಟಪಗಳಲ್ಲಿ ಕಳವು ಮಾಡುತ್ತಿದ್ದರಿಂದ ಈತನ ಹೆಸರು ಕಿರಣ್ ಅಲಿಯಾಸ್ ಚೌಲ್ಟ್ರಿ ಕಿರಣ್‌ ಎಂಬ ಕುಖ್ಯಾತಿ ಪಡೆದಿದೆ. ಆರೋಪಿಯು ದಾವಣಗೆರೆ, ಹುಬ್ಬಳಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಕಳವು, ದರೋಡೆ, ಮನೆಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *