ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸದಲ್ಲಿ ಇಂದು ನಡೆದ ಸಾರ್ವಜನಿಕ ಕುಂದುಕೊರತೆ ವಿಚಾರಣೆಯ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆ.
ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಸೇರಿದಂತೆ ಹಲವು ಪಕ್ಷಗಳು ಘಟನೆಯನ್ನು ಖಂಡಿಸಿದ್ದು, ಆರೋಪಿಯನ್ನು ಕೂಡಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯಿಂದಾಗಿ ದೆಹಲಿ ಪೊಲೀಸರು ಮುಖ್ಯಮಂತ್ರಿಯವರ ಜನ ಸೇವಾ ಸದನದ ಹೊರಗೆ ಬ್ಯಾರಿಕೇಡ್‌ಗಳನ್ನು ಹಾಕಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. “ಇಂದು ಬೆಳಗ್ಗೆ ಒಬ್ಬ ವ್ಯಕ್ತಿ ಸಿಎಂ ಬಳಿ ಬಂದು, ಕೆಲವು ಕಾಗದವನ್ನು ತೋರಿಸಿ, ಇದ್ದಕ್ಕಿದ್ದಂತೆ ಅವರ ಕೈ ಹಿಡಿದು ಅವರನ್ನು ತನ್ನ ಕಡೆಗೆ ಎಳೆಯಲು ಪ್ರಯತ್ನಿಸಿದರು. ಈ ಸಮಯದಲ್ಲಿ, ಸ್ವಲ್ಪ ನೂಕುನುಗ್ಗಲು ಉಂಟಾಯಿತು. ಜನರು ಅವರನ್ನು ಹಿಡಿದರು. ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ. ಸಿಎಂ ಆರೋಗ್ಯ ಸ್ಥಿರವಾಗಿದ್ದು ವೈದ್ಯರು ಅವರನ್ನು ಪರೀಕ್ಷಿಸಿದ್ದಾರೆ. ನಾನು ಅವರನ್ನು ಭೇಟಿಯಾಗಿದ್ದೇನೆ. ಅವರ ತಲೆಗೆ ಸ್ವಲ್ಪ ಪೆಟ್ಟು ಬಿದ್ದಿದೆ ಎಂದು ತೋರುತ್ತದೆ ಎಂದು ತಿಳಿಸಿದ್ದಾರೆ.
ಆ ವ್ಯಕ್ತಿ ಸಿಎಂ ಗುಪ್ತಾ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ವದಂತಿಗಳನ್ನು ಸಚ್‌ದೇವ ಅವರು ಸಹ ತಳ್ಳಿಹಾಕಿದರು. “ಹೊಡೆತ ಅಥವಾ ಕಲ್ಲು ತೂರಾಟದ ಕಥೆಗಳೆಲ್ಲವೂ ಕಟ್ಟುಕಥೆ. ರಾಜಕೀಯದಲ್ಲಿ ಇಂತಹ ಘಟನೆಗಳು ಖಂಡನೀಯ. ಸಿಎಂ ಇದೀಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ, ಅವರು ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಿಲ್ಲ ಎಂದೂ ಹೇಳಿದ್ದಾರೆ”.
ಘಟನೆ ದುರದೃಷ್ಟಕರ ಎಂದ ಕಾಂಗ್ರೆಸ್ ದೆಹಲಿ ಮುಖ್ಯಸ್ಥ: ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದ್ರ ಯಾದವ್ ಘಟನೆಯನ್ನು “ದುರದೃಷ್ಟಕರ” ಎಂದು ಕರೆದಿದ್ದಾರೆ. ಈ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ವಾಸ್ತವತೆಯನ್ನು ಬಹಿರಂಗಪಡಿಸುತ್ತದೆ ಎಂದರು. ದೆಹಲಿ ಮುಖ್ಯಮಂತ್ರಿಯೇ ಸುರಕ್ಷಿತವಾಗಿಲ್ಲದಿದ್ದರೆ, ಸಾಮಾನ್ಯ ಪುರುಷ ಅಥವಾ ಸಾಮಾನ್ಯ ಮಹಿಳೆ ಹೇಗೆ ಸುರಕ್ಷಿತವಾಗಿರಲು ಹೇಗೆ ಸಾಧ್ಯ?” ಎಂದು ಅವರು ಪ್ರಶ್ನಿಸಿದರು.