ಪ್ರಧಾನಿ ಮೋದಿ ಪ್ರಯಾಣಿಸುವ ವಿಮಾನದ ಮೇಲೆ ಅಮೆರಿಕದ ಉಗ್ರರು ದಾಳಿ ನಡೆಸಬಹುದು ಎಂದು ಹುಸಿ ಬಾಂಬ್ ಬೆದರಿಕೆ ಮಾಡಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಪ್ರಯಾಣಿಸುವ ವಿಮಾನದ ಮೇಲೆ ಉಗ್ರರು ದಾಳಿ ನಡೆಸುತ್ತಾರೆ ಎಂದು ಬೆದರಿಕೆ ಕರೆ ಬಂದಿತ್ತು.
ಕರೆ ಮಾಡಿದ ನಂತರ ವ್ಯಕ್ತಿ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದರಿಂದ ಪತ್ತೆ ಹಚ್ಚಲು ವಿಳಂಬವಾಗಿತ್ತು. ಮಂಗಳವಾರ ಸಂಜೆ ಮುಂಬೈನ ಚೆಂಬೂರ್ ಪ್ರದೇಶದಲ್ಲಿ ವಾಸವಾಗಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕರೆ ಮಾಡಿದ ವ್ಯಕ್ತಿ ಮೋದಿ ಪ್ರಯಾಣಿಸುವ ವಿಮಾನವನ್ನು ಉಗ್ರರು ಸ್ಫೋಟಿಸಲಿದ್ದಾರೆ. ಇದೇ ಉಗ್ರರು ಕಳೆದ ಒಂದು ತಿಂಗಳಲ್ಲಿ ೬ ವಿಮಾನಗಳನ್ನು ಹೊಡೆದುರುಳಿಸಿದ್ದಾರೆ. ಮೋದಿ ಪ್ರಯಣಿಸುವ ವಿಮಾನದಲ್ಲೂ ಬಾಂಬ್ ಇರಿಸಿದ್ದಾರೆ ಎಂದು ಹಿಂದಿಯಲ್ಲಿ ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದ.
ಪೊಲೀಸರು ಕರೆ ಬಂದ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದಾಗ ಈತ ಬೇರೆ ಬೇರೆ ಕಾರಣಗಳಿಗೆ ಪೊಲೀಸ್ ಕಂಟ್ರೋಲ್ ರೂಮ್ ಗೆ 1400 ಬಾರಿ ಕರೆ ಮಾಡಿದ್ದ ಎಂಬುದು ಬೆಳಕಿಗೆ ಬಂದಿದೆ. ಈತ ಮಾನಸಿಕ ಅಸ್ವಸ್ಥನಾಗಿದ್ದು, ವೈದ್ಯಕೀಯ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ ಎಂದು ಮುಂಬೈ ಪೊಲೀಸರು ವಿವರಿಸಿದ್ದಾರೆ.