Menu

ವಾಣಿಜ್ಯ ತೆರಿಗೆ ಇಲಾಖೆಗೆ ಜಿಎಸ್‍ಟಿ ವಂಚಿಸಿದಾತ ಅರೆಸ್ಟ್‌ 

ಬೆಂಗಳೂರಿನ ಜಿಮ್ ಮತ್ತು ಫಿಟ್ನೆಸ್ ಕೇಂದ್ರದ ಮಾಲೀಕರೊಬ್ಬರು ಗ್ರಾಹಕರಿಂದ ರೂ.39 ಕೋಟಿಗೂ ಮಿಗಿಲಾದ ಶುಲ್ಕ ಮತ್ತು  ಜಿ.ಎಸ್.ಟಿ ತೆರಿಗೆಯನ್ನು ಸಂಗ್ರಹಿಸಿದ್ದರೂ ಸರ್ಕಾರಕ್ಕೆ ಪಾವತಿಸದ ಪ್ರಕರಣವೊಂದರಲ್ಲಿ  ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಜಿಮ್ ಮಾಲೀಕರನ್ನು ಬಂಧಿಸಿದ್ದಾರೆ.

ಜಿಮ್ ಮಾಲೀಕರು ನಗರದಲ್ಲಿ ಹಲವು ಶಾಖೆಗಳನ್ನು ಹೊಂದಿದ್ದು, ಏಕಕಾಲದಲ್ಲಿ ಎಲ್ಲಾ ಜಿಮ್ ಶಾಖೆಗಳಲ್ಲಿ ತಪಾಸಣೆ ನಡೆಸಿದಾಗ, ಗ್ರಾಹಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮೆ ಮಾಡಿದ್ದು, ಸದರಿ ವಹಿವಾಟನ್ನು ಸರ್ಕಾರಕ್ಕೆ ಪೂರ್ಣ ಪ್ರಮಾಣದಲ್ಲಿ ಘೋಷಿಸಿಕೊಳ್ಳದೇ ತೆರಿಗೆ ವಂಚನೆಯನ್ನು ಮಾಡಿರುವುದು ವಿಚಾರಣೆಯಿಂದ ಕಂಡುಬಂದಿರುತ್ತದೆ. ಗ್ರಾಹಕರನ್ನು ಆನ್‍ಲೈನ್ ಪಾವತಿಗಳ ಬದಲಾಗಿ ನಗದು ನೀಡುವಂತೆ ಒತ್ತಾಯ ಪಡಿಸುತ್ತಿದ್ದ ಮಾಲೀಕರು ಸದರಿ ವಹಿವಾಟನ್ನು ಸರ್ಕಾರಕ್ಕೆ ಘೋಷಿಸಿಕೊಳ್ಳದೇ ತೆರಿಗೆ ತಪ್ಪಿಸುತ್ತಿದ್ದು ವಿಚಾರಣೆಯಿಂದ ತಿಳಿದುಬಂದಿರುತ್ತದೆ.

ತಪಾಸಣೆಯ ವೇಳೆ ಜಾರಿ ವಿಭಾಗದ ಅಧಿಕಾರಿಗಳು ಲೆಕ್ಕ ಪುಸ್ತಕಗಳು, ಎಲೆಕ್ಟ್ರಾನಿಕ್ ದಾಖಲೆಗಳು ಹಾಗೂ ತೆರಿಗೆ ವಂಚನೆಯನ್ನು ಸಾಬೀತು ಮಾಡುವ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಯುತ್ತಲೂ ವಂಚನೆಯ ವಹಿವಾಟು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಜಿ.ಎಸ್.ಟಿ ಕಾಯ್ದೆಯು ಸ್ವಯಂ ಘೋಷಿತ ವಹಿವಾಟು ಮತ್ತು ತೆರಿಗೆ ಪಾವತಿಯನ್ನು ಪ್ರೋತ್ಸಾಹಿಸುತ್ತದೆ. ವರ್ತಕರು ಜಿ.ಎಸ್.ಟಿ ಕಾಯ್ದೆಯ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸಿ ಪಾರದರ್ಶಕವಾಗಿ ವಹಿವಾಟನ್ನು ಘೋಷಿಸಿಕೊಂಡು ಗ್ರಾಹಕರಿಂದ ಸಂಗ್ರಹಿಸಿದ ತೆರಿಗೆಯನ್ನು ನಿಯಮಿತವಾಗಿ ಸರ್ಕಾರಕ್ಕೆ ಪಾವತಿ ಮಾಡಬೇಕೆಂದು ತಿಳಿಸುತ್ತಾ, ಮುಂದಿನ ದಿನಗಳಲ್ಲಿ ತೆರಿಗೆ ವಂಚನೆಯಲ್ಲಿ ಭಾಗಿಯಾದವರ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಕರ್ನಾಟಕ ವಾಣಿಜ್ಯ ತೆರಿಗೆಗಳ ಆಯುಕ್ತರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *