ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಎದೆನೋವು ಎನ್ನುತ್ತ ಬಂದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಲು ಹಾಸಿಗೆ ಮೇಲೆ ಮಲಗಿಸಿದ ಕೆಲವೇ ನಿಮಿಷಗಳಲ್ಲಿ ಹೃದಯ ಸ್ತಂಭನಗೊಂಡು ಮೆದುಳು ನಿಷ್ಕ್ರಿಯಗೊಂಡಿದೆ.
ಇಂದು ಬೆಳಿಗ್ಗೆ 52 ವರ್ಷದ ಕೋನಪ್ಪ ಎಂಬವರು ಎದೆ ನೋವಿನಿಂದ ಬಳಲುತ್ತ ನಡೆದುಕೊಂಡು ಆಸ್ಪತ್ರೆಗೆ ಬಂದಿದ್ದರು. ಒಳಗೆ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ಕಾರ್ಡಿಯಾಕ್ ಅರೆಸ್ಟ್ ಆಗಿ ಕುಸಿದು ಬಿದ್ದರು. ವೈದ್ಯರು ತಕ್ಷಣವೇ ಚಿಕಿತ್ಸೆ ನೀಡಲು ಮುಂದಾಗಿ ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ಕಳಿಸಲು ಸಿದ್ಧರಾಗುವಾಗ ಕೋನಪ್ಪ ಅವರ ಮೆದುಳು ನಿಷ್ಕ್ರಿಯಗೊಂಡಿದೆ.
ಕೋನಪ್ಪ ಬೆಳಗ್ಗೆ ಲವಲವಿಕೆಯಿಂದ ಇದ್ದರು, ಕೆಲವು ನಿಮಿಷಗಳಲ್ಲಿ ಬ್ರೈನ್ ಡೆಡ್ ಆಗುವುದು ಎಂದರೆ ದುಃಖದ ಸಂಗತಿ ಎಂದು ಮನೆಯವರು ಹೇಳಿದ್ದಾರೆ. ಎದೆನೋವು, ಉಸಿರಾಟದ ತೊಂದರೆ, ಶರೀರದ ಎಡಭಾಗದಲ್ಲಿ ತೀವ್ರ ನೋವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಲ್ಲಿ ಯಾವುದೇ ನಿರ್ಲಕ್ಷ್ಯ ತಾಳಭಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.