ನವದೆಹಲಿ: ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಾಗೂ ಎಲ್ಒಸಿಯಲ್ಲಿ ನಿರಂತರವಾಗಿ ಸಾಗುತ್ತಿರುವ ಗಡಿಯಾಚೆಗಿನ ದಾಳಿಗಳ ಕುರಿತು ಕೇಂದ್ರ ಸರ್ಕಾರ ಕರೆದಿದ್ದ ಸರ್ವ ಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರಿನ ಕುರಿತು ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಸಂಸತ್ತಿಗಿಂತ ಮೇಲಿನವರಾ ಎಂದು ಪ್ರಶ್ನಿಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಬುಧವಾರ ನಸುಕಿನಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುತಾಣ ಗುರಿಯಾಗಿಸಿಕೊಂಡು ಭಾರತ ಕ್ಷಿಪಣಿ ದಾಳಿ ಕೈಗೊಂಡು, 9 ಉಗ್ರರ ಶಿಬಿರಗಳ ಮೇಲೆ ಈ ದಾಳಿ ನಡೆಸಿತು. ಈ ಕಾರ್ಯಾಚರಣೆ ಮತ್ತು ಇದಾದ ನಂತರದ ಪರಿಸ್ಥಿತಿಗಳ ಕುರಿತು ರಾಜಕೀಯ ಪಕ್ಷಗಳಿಗೆ ಗುರುವಾರ ಸರ್ಕಾರ ವಿವರಣೆ ನೀಡಿತು.
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಖರ್ಗೆ, ಸರ್ಕಾರದ ವಿವರಣೆ ಆಲಿಸಿದೆವು. ದೇಶದ ಹಿತಾಸಕ್ತಿ ಹಾಗೂ ದೇಶದ ಭದ್ರತೆ ದೃಷ್ಟಿಯಿಂದ ದಾಳಿ ನಡೆಸಿದ್ದಾಗಿ ತಿಳಿಸಿದ್ದಾರೆ. ನಾವೆಲ್ಲಾ ಸರ್ಕಾರದ ಜೊತೆಗೆ ಇದ್ದು, ದೇಶದ ಹಿತಾಸಕ್ತಿಗೆ ನಮ್ಮ ಬೆಂಬಲವಿದ್ದು, ಕಾರ್ಯಾಚರಣೆ ಬೆಂಬಲ ವ್ಯಕ್ತಪಡಿಸಿದ್ದೇವೆ. ಸರ್ಕಾರದ ಈ ಕಾರ್ಯಾಚರಣೆಗೆ ವಕ್ಕೋರಲಿನ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಖರ್ಗೆ, ಈ ಸಭೆಯಲ್ಲಿ ಪ್ರಧಾನಿ ಗೈರಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಬಾರಿ ಪಹಲ್ಗಾಮ್ ದಾಳಿ ನಡೆದ ಸಂದರ್ಭದಲ್ಲಿ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿಯೂ ಅವರು ಉಪಸ್ಥಿತರಿರಲಿಲ್ಲ. ಈ ಬಾರಿ ಕೂಡ ಹಾಜರಾಗಿಲ್ಲ. ಅವರ ಸಂಸತ್ತಿಗಿಂತ ಉನ್ನತ ಎಂದು ಭಾವಿಸದಂತೆ ಇದೆ. ಸಮಯ ಬಂದಾಗ ನಾವು ಕೇಳುತ್ತೇವೆ. ಇದೀಗ ಬಿಕ್ಕಟ್ಟಿನ ಸಮಯವಿದ್ದು, ನಾವ್ಯಾರು ಇದನ್ನು ಟೀಕಿಸಬಾರದು ಎಂದು ನಿರ್ಧರಿಸಿದ್ದೇವೆ ಎಂದರು.
ಸರ್ವ ಪಕ್ಷ ಸಭೆಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಮಾತನಾಡಿ, ದೇಶದ ಹಿತಾಸಕ್ತಿ ಹಿನ್ನೆಲೆ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುವುದಾಗಿ ಪುನರುಚ್ಚರಿಸಿದರು.
ಖರ್ಗೆ ಅವರು ಹೇಳಿದಂತೆ ನಾವು ಎಲ್ಲರೂ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ಈ ವಿಷಯಗಳನ್ನು ಚರ್ಚಿಸಲು ಸಾಧ್ಯವಿಲ್ಲ. ನಾವೆಲ್ಲರೂ ಬೆಂಬಲ ನೀಡಿದ್ದೇವೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಒಗ್ಗಟ್ಟು ಅಗತ್ಯ ಎಂದು ಅವರು ಪ್ರತಿಪಾದಿಸಿದರು.
ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಜೆಪಿ ನಡ್ಡಾ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.