“ಹೆಸರು ಸಂಪಾದನೆಗೆ ನಾನು, ನನ್ನ ವಂಶದವರು ಆಲೋಚಿಸುತ್ತೇವೆ. ಲಾಭದ ಬಗ್ಗೆ ಯೋಚನೆ ಮಾಡುವವನು ನೀನು” ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿಧಾನ ಪರಿಷತ್ ನಲ್ಲಿ ಸಿಟಿ ರವಿ ವಿರುದ್ಧ ಹರಿಹಾಯ್ದರು.
ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡುತ್ತಾ ಸಿ.ಟಿ ರವಿ ಅವರು, “ಬೆಂಗಳೂರು ಟನಲ್ ರಸ್ತೆ ಯೋಜನೆ ಪಾರದರ್ಶಕವಾಗಿರಲಿ. ಏಕೆಂದರೆ ಲಾಭ ಇಲ್ಲದೆ ಡಿ.ಕೆ. ಶಿವಕುಮಾರ್ ಅವರು ಏನು ಮಾಡುವುದಿಲ್ಲ ಎಂಬ ಭಾವನೆ ಎಲ್ಲರಲ್ಲಿದೆ ಎಂದು ಕುಟುಕುವ ಪ್ರಯತ್ನ ಮಾಡಿದಾಗ ಶಿವಕುಮಾರ್ ಅವರು ಹೀಗೇ ತಿರುಗೇಟು ನೀಡಿದರು.
ಟನಲ್ ರಸ್ತೆ ಸಂಚಾರ ದಟ್ಟಣೆಗೆ ದೀರ್ಘಕಾಲದ ಪರಿಹಾರವಲ್ಲ ಎಂಬ ಸಾರಿಗೆ ಸಂಸ್ಥೆಗಳ ವರದಿ ಇದೆ ಎಂಬ ರವಿ ಅವರ ಪ್ರಶ್ನೆಗೆ ಶಿವಕುಮಾರ್ ಅವರು ಸವಿವರವಾಗಿ ಉತ್ತರಿಸಿದರು. “ಬೆಂಗಳೂರು ನಗರ ನವದೆಹಲಿಯಂತೆ ಯೋಜಿತ ನಗರವಲ್ಲ. ಕೆಂಪೇಗೌಡರು ಕಟ್ಟಿದ ಈ ನಗರದ ರಸ್ತೆಗಳು ಇದ್ದಷ್ಟೇ ಇವೆ. ಆದರೆ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ನಾವು ರಸ್ತೆ ಅಗಲೀಕರಣಕ್ಕೆ ಭೂ ಸ್ವಾಧೀನ ಮಾಡಿಕೊಂಡರೆ ಡಬಲ್ ಪರಿಹಾರ ನೀಡಬೇಕಾಗುತ್ತದೆ. ಇಷ್ಟು ಪರಿಹಾರ ನೀಡಲು ಯಾವುದೇ ಸರ್ಕಾರದಿಂದಲೂ ಸಾಧ್ಯವಿಲ್ಲ. ಹೀಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಮೇಲ್ಸೆತುವೆ, ಮೆಟ್ರೋ ಕೂಡ ಮಾಡಲಾಗಿದೆ. ಮೆಟ್ರೋ ಇದ್ದೆಡೆ ಈಗ ಹೊಸದಾಗಿ ಮೇಲ್ಸೆತುವೆ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಸಚಿವರಾದ ರಾಮಲಿಂಗಾರೆಡ್ಡಿ ಅವರು ಈ ಹಿಂದೆ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗೂ ಪ್ರಾಯೋಗಿಕವಾಗಿ ಡಬಲ್ ಡೆಕ್ಕರ್ ಯೋಜನೆ ಮಾಡಿದ್ದಾರೆ. ಇದನ್ನು ಪ್ರಧಾನಮಂತ್ರಿಗಳಿಗೂ ತೋರಿಸಿದಾಗ, ಅವರು ಕೂಡ ಮೆಚ್ಚಿ ಅಭಿನಂದನೆ ಸಲ್ಲಿಸಿದರು. ಈ ಮಾರ್ಗದ ಮೇಲೆ ಸೋಲಾರ್ ವ್ಯವಸ್ಥೆ ಮಾಡಲು ಸಲಹೆ ನೀಡಿದರು” ಎಂದು ತಿಳಿಸಿದರು.
“44 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೆಲ್ಸೇತುವೆ ಮಾಡಲು ಮುಂದಾಗಿದ್ದೇವೆ. ಇದರ ನಿರ್ಮಾಣ ವೆಚ್ಚವನ್ನು ಪಾಲಿಕೆ ಹಾಗೂ ಬಿಎಂಆರ್ ಸಿಎಲ್ ಸೇರಿ ಭರಿಸುವ ತೀರ್ಮಾನಕ್ಕೆ ಬಂದಿದ್ದೇವೆ. 113 ಕಿ.ಮೀ ಉದ್ದದಷ್ಟು ಎಲಿವೇಟೆಡ್ ಕಾರಿಡಾರ್ ಮಾಡಲು ಡಿಪಿಆರ್ ಸಿದ್ಧಪಡಿಸಲಾಗಿದ್ದು, ಟೆಂಡರ್ ಕರೆಯಲು ತಯಾರಿ ಮಾಡಿಕೊಳ್ಳಲಾಗಿದೆ. ಇದೆಲ್ಲದರ ನಂತರ ನಮ್ಮ ಮುಂದೆ ಇರುವ ಆಯ್ಕೆ ಟನಲ್ ರಸ್ತೆ ಮಾತ್ರ” ಎಂದರು.
“ನಾನು ಒಂದೂವರೆ ವರ್ಷ ಟನಲ್ ರಸ್ತೆ ಬಗ್ಗೆ ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದೇವೆ. ಮೆಟ್ರೋ ರೀತಿ ಈ ಸುರಂಗ ಮಾರ್ಗ ಕೇವಲ ರಸ್ತೆ ಕೆಳಗೆ ಹೋಗುವುದಿಲ್ಲ, ಕಟ್ಟಡಗಳ ಕೆಳಗೂ ಸಾಗುತ್ತದೆ. ಹೀಗಾಗಿ ಇದನ್ನು ನಿರ್ಮಿಸುವಾಗ ಸುರಕ್ಷತಾ ಕ್ರಮ ವಹಿಸಬೇಕಾಗುತ್ತದೆ. ಮುಖ್ಯಮಂತ್ರಿಗಳು ಜಾಗತಿಕ ಟೆಂಡರ್ ಕರೆದು ಯೋಜನೆ ಮಾಡಲು ಸೂಚನೆ ನೀಡಿದ್ದಾರೆ. ಇದರಲ್ಲಿ ನಾವು 40 % ವಿಜಿಎಫ್ ನೀಡುತ್ತೇವೆ. 60% ಬಂಡವಾಳವನ್ನು ಗುತ್ತಿಗೆದಾರ ಸಂಸ್ಥೆ ಹಾಕಲಿದೆ. ನಂತರ ಟೋಲ್ ಶುಲ್ಕ ವಿಧಿಸಲಾಗುವುದು” ಎಂದು ತಿಳಿಸಿದರು.
ಬೆಂಗಳೂರಿಗೆ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕೆಂಬುದು ನನ್ನ ಬಯಕೆ
“ಕೆಲವು ಸಂಸದರು ನನ್ನ ಮೇಲೆ ಆರೋಪ ಮಾಡಿ, ನಾನು ದುಡ್ಡು ಹೊಡೆಯಲು ಈ ಯೋಜನೆ ಮಾಡುತ್ತಿದ್ದೇನೆ ಎಂದು ಟೀಕೆ ಮಾಡಿದ್ದಾರೆ. ಬಹಳ ಸಂತೋಷ. ನಾನು ಇಲ್ಲಿ ವ್ಯವಹಾರ ನೋಡುತ್ತಿಲ್ಲ. ನಾನು ಬೆಂಗಳೂರಿನ ಮೇಲೆ ಬಹಳ ಆಸಕ್ತಿ ಹೊಂದಿದ್ದು, ಈ ರಾಜ್ಯ ಹಾಗೂ ನಗರದಲ್ಲಿ ನನ್ನದೇ ಆದ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂದು ತೀರ್ಮಾನಿಸಿದ್ದೇನೆ. ನಮ್ಮ ಯೋಜನೆಯಲ್ಲಿ ಯಾವುದೇ ಲೋಪ, ಭ್ರಷ್ಟಾಚಾರ ಇದ್ದರೆ, ಯಾವುದೇ ತನಿಖೆಗೂ ಸಿದ್ಧ. ನಾನು ನಿಮ್ಮ ಸಹಕಾರ ಪಡೆದು ಈ ಯೋಜನೆ ಮಾಡುತ್ತೇನೆ. ಮೊನ್ನೆ ಪ್ರಧಾನಮಂತ್ರಿಗಳಿಗೆ ಸಹಕಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ‘ನೀವು ಈ ಯೋಜನೆಯಲ್ಲಿ ಮುಂದುವರಿಯಿರಿ, ನಿಮ್ಮ ಪ್ರಸ್ತಾವನೆ ಪರಿಶೀಲನೆ ಮಾಡುತ್ತೇನೆ’ ಎಂದು ಪ್ರಧಾನಮಂತ್ರಿಗಳು ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.
ನಿಮ್ಮ ಯೋಜನೆಗಳ ಉದ್ದೇಶವೂ ಹಣ ಮಾಡುವುದೆಯೇ..?
“ನಿಮ್ಮ ಪಕ್ಷದವರು ಕೆಲವರು ಬೆಂಬಲ ನೀಡುತ್ತಾರೆ. ಕೆಲವರು ರಾಜಕಾರಣಕ್ಕೆ ಟೀಕೆ ಮಾಡುತ್ತಾರೆ. ನಿಮ್ಮ ಅವಧಿಯಲ್ಲೂ ಅನೇಕ ಯೋಜನೆ ಮಾಡಿದ್ದೀರಿ ಎಲ್ಲವನ್ನು ಹಣ ಮಾಡಲು ಮಾಡಿದ್ದೀರಾ? ಜನ ಸೇವೆ ದೃಷ್ಟಿಯಿಂದ ನೀವು ಹೇಗೆ ಯೋಜನೆ ಮಾಡಿದ್ದೀರೋ, ನಾನು ಹಾಗೆ ಈ ಸುರಂಗ ರಸ್ತೆ, ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್, ಬಫರ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಬಹಳ ಆಸೆಪಟ್ಟು ನಾನು ಈ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದು, ನಿಮ್ಮ ಸಲಹೆ ಏನೆ ಇದ್ದರೂ ಹೇಳಿ” ಎಂದು ವಿವರಿಸಿದರು.
ನಮ್ಮ ಟನಲ್ ಯೋಜನೆ ವೆಚ್ಚವೇ ಕಡಿಮೆ
ನಂತರ ಸಿ.ಟಿ ರವಿ ಅವರು ಮಾತನಾಡಿ, ಅಟಲ್ ಟನಲ್ ಸೇರಿದಂತೆ ಬೇರೆ ಸುರಂಗ ರಸ್ತೆಗೆ ತಗುಲಿರುವ ವೆಚ್ಚಕ್ಕೂ ಇಲ್ಲಿನ ಸುರಂಗ ವೆಚ್ಚ ಡಬಲ್ ಆಗಿದೆ ಹಾಗೂ ಬ್ಲಾಕ್ ಲಿಸ್ಟ್ ಸಂಸ್ಥೆಗಳು ಯಾಕೆ ಡಿಪಿಆರ್ ಮಾಡಿವೆ? ಇದು ಮತ್ತೊಂದು ನೈಸ್ ರಸ್ತೆ ಆಗಬಾರದು ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಶಿವಕುಮಾರ್ ಅವರು, “ಸದಸ್ಯರು ಬ್ಲಾಕ್ ಲಿಸ್ಟ್ ಆಗಿವೆ ಎಂದು ಹೇಳುತ್ತಿರುವ ಸಂಸ್ಥೆಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇನ್ನು ಕಟ್ ಅಂಡ್ ಪೇಸ್ಟ್ ವಿಚಾರ ಕೂಡ ನಿಜ. ಇದನ್ನು ಮಾಧ್ಯಮಗಳು ಬೆಳಕಿಗೆ ತಂದಾಗಲೇ ನಾವು ಎಚ್ಚೆತ್ತು, ಸಂಸ್ಥೆಗೆ ದಂಡ ವಿಧಿಸಲಾಗಿದೆ. ಇನ್ನು ಬಾಟಲ್ ನೆಕ್ ಇರುವ ಕಡೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ” ಎಂದು ಉತ್ತರಿಸಿದರು.
“ಇನ್ನು ಸುರಂಗದ ಒಳಗೆ ನಾವು ಕೆಲವು ಕಡೆಗಳಲ್ಲಿ ತುರ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸಬೇಕಾಗುತ್ತದೆ. ಇದು 3+1 ವಾಹನ ಸಂಚಾರ ಮಾಡಲು ಅವಕಾಶವಿರುವ 14 ಮೀ. ಸುರಂಗವಾಗಿದೆ. ಇದು ಸಣ್ಣ ಸುರಂಗವಲ್ಲ. ನೀವು ಅಟಲ್ ಟನಲ್ ಹಾಗೂ ಇತರೆ ಚಿಕ್ಕ ಟನಲ್ ಗೆ ಹೋಲಿಕೆ ಮಾಡಿಕೊಳ್ಳುವುದು ಬೇಡ. ನಾವು ನಿರ್ಮಿಸುತ್ತಿರುವ ಸುರಂಗ ದೇಶದಲ್ಲೇ ದೊಡ್ಡ ಸುರಂಗಗಳಲ್ಲಿ ಒಂದು. ಇನ್ನು ಬೇರೆ ದೊಡ್ಡ ಸುರಂಗಗಳ ವೆಚ್ಚಕ್ಕೆ ಹೋಲಿಸಿದರೆ, ನಮ್ಮ ಟನಲ್ ರಸ್ತೆ ಪ್ರತಿ ಕಿ.ಮೀಗೆ 770 ಕೋಟಿ ಆಗಿದೆ. ಗಾಯ್ ಮುಖೆ ಟನಲ್, ಆರೆಂಜ್ ಗೇಟ್ ಟನಲ್ ನಲ್ಲಿ ಪ್ರತಿ ಕಿ.ಮೀಗೆ ರೂ.1316 ಕೋಟಿ ಇದೆ. ನಮಗಿಂತ ಈ ಟನಲ್ ರಸ್ತೆಗಳ ವೆಚ್ಚ 60-70% ಹೆಚ್ಚಾಗಿದೆ. ನಾವು ಬೇರೆ ಟನಲ್ ಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ನಿರ್ಮಿಸುತ್ತಿದ್ದೇವೆ” ಎಂದು ವಿವರಿಸಿದರು.