ಕೆಲಸದಾಕೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ನ್ಯಾ. ಗಜಾನನ ಭಟ್ ಭಟ್ ಅವರಿದ್ದ ಪೀಠ ಪ್ರಜ್ವಲ್ ದೋಷಿ ಎಂದು ಹೇಳಿದೆ.
ತೀರ್ಪು ಪ್ರಕಟಿಸುವಾಗ ಪ್ರಜ್ವಲ್ ರೇವಣ್ಣ ಕೋರ್ಟ್ ಹಾಲ್‌ನಲ್ಲಿ ಹಾಜರಿದ್ದರು. ಪ್ರಕರಣದ ಕೊನೆಯ ವಿಚಾರಣೆ ಜುಲೈ 30 ರಂದು ನಡೆದಿತ್ತು. ಸರ್ಕಾರಿ ಪರ ವಕೀಲ ಎನ್ ಜಗದೀಶ್ ಹಾಗೂ ಅಶೋಕ್ ನಾಯಕ್ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಜಿ ಹಾಜರಾಗಿದ್ದರು. ಕೋರ್ಟ್ ಮೊಬೈಲ್ ಸೇರಿದಂತೆ ತಾಂತ್ರಿಕ ಸಾಕ್ಷ್ಯಗಳ ಬಗ್ಗೆ ಸ್ಪಷ್ಟನೆ ಕೇಳಿತ್ತು. ಇದರೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಗ್ಗೆ ನ್ಯಾಯಾಧೀಶರು ಮಾಹಿತಿ ಕೇಳಿದ್ದರು.
14 ತಿಂಗಳಿನಿಂದ ಜೈಲು ವಾಸಿಯಾಗಿರುವ ಪ್ರಜ್ವಲ್ ವಿರುದ್ಧದ ಇನ್ನೂ ಕೆಲವು ಪ್ರಕರಣಗಳಲ್ಲಿ ತೀರ್ಪು ಹೊರ ಬರಬೇಕಿದೆ. ಕೆ.ಆರ್ ನಗರ ಸಂತ್ರಸ್ತೆ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ಅತ್ಯಾಚಾರ, ಅಪಹರಣ ಕೇಸ್ ದಾಖಲಾಗಿತ್ತು. ಸಂತ್ರಸ್ತೆಯನ್ನ ರೇವಣ್ಣ, ಭವಾನಿ, ಸತೀಶ್ ಬಾಬು ಸೇರಿದಂತೆ 9 ಜನ ಸೇರಿ ಅಪಹರಿಸಿದ್ದರು. ಬಳಿಕ ಆಕೆಯನ್ನು ಹುಣಸೂರು ಬಳಿಯ ತೋಟದ ಮನೆಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಈ ಸಂಬಂಧ ರೇವಣ್ಣ ಸೇರಿದಂತೆ 8 ಜನ ಜೈಲಿಗೆ ಹೋಗಿದ್ದರು. ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಸಂತ್ರಸ್ತೆಯನ್ನು ರಕ್ಷಿಸಿದ ಎಸ್‌ಐಟಿ ಆಕೆಯ ಹೇಳಿಕೆ ಪಡೆದು ಪ್ರಕರಣ ದಾಖಲಿಸಿತ್ತು. ತನಿಖೆ ಮಾಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪ್ರಜ್ವಲ್ ಮೊಬೈಲ್‌ನಲ್ಲಿ ಸಂತ್ರಸ್ತೆಯನ್ನು ಬೆತ್ತಲುಗೊಳಿಸಿ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿದ್ದ ವೀಡಿಯೊ ಪತ್ತೆಯಾಗಿತ್ತು. ಎಫ್‌ಎಸ್‌ಎಸ್ ಮೂಲಕ ವೀಡಿಯೊ ತುಣುಕಿನಲ್ಲಿರುವುದು ಪ್ರಜ್ವಲ್ ರೇವಣ್ಣ ಎನ್ನುವುದು ಸಾಬೀತಾಗಿತ್ತು. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು.