Menu

ಲಂಡನ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ವಿರೂಪ

ಲಂಡನ್ ವಿಶ್ವವಿದ್ಯಾಲಯದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಗಾಂಧಿ ಜಯಂತಿಗೆ ಎರಡು ದಿನಗಳಿರುವಾಗ ಲಂಡನ್‌ನ ಟ್ಯಾವಿಸ್ಟಾಕ್ ಸ್ಕ್ವೇರ್‌ನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ. ಭಾರತದ ಹೈಕಮಿಷನ್ ಇದನ್ನು ಖಂಡಿಸಿದ್ದು, ನಾಚಿಕೆಗೇಡಿನ ಕೃತ್ಯ ಮತ್ತು ಅಹಿಂಸೆಯ ಪರಂಪರೆಯ ಮೇಲಿನ ದಾಳಿ ಎಂದು ಹೇಳಿದೆ.

ಭಾರತೀಯ ಹೈಕಮಿಷನ್ ಈ ವಿಷಯವನ್ನು ಸ್ಥಳೀಯ ಆಡಳಿತ ಮತ್ತು ಮೆಟ್ರೋಪಾಲಿಟನ್ ಪೊಲೀಸರೊಂದಿಗೆ ಪ್ರಸ್ತಾಪಿಸಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವುದಾಗಿ ತಿಳಿಸಿದೆ. ಭಾರತೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರತಿಮೆಯನ್ನು ದುರಸ್ತಿ ಮಾಡಿ ಮರುಸ್ಥಾಪಿಸುವ ಕೆಲಸ ಕೈಗೊಂಡಿದ್ದಾರೆ.

ಮಹಾತ್ಮ ಗಾಂಧಿ ಧ್ಯಾನಸ್ಥ ಭಂಗಿಯಲ್ಲಿ ಕುಳಿತಿರುವುದನ್ನು ಚಿತ್ರಿಸುವ ಈ ಪ್ರತಿಮೆಯ ಪೀಠದ ಮೇಲೆ ಭಾರತ ವಿರೋಧಿ ಬರಹಗಳು ಕಂಡುಬಂದಿವೆ. ಪ್ರತಿಮೆಯ ಮೇಲೆ ಬಿಳಿ ಬಣ್ಣವನ್ನು ಬಳಿಯಲಾಗಿತ್ತು. ವಿಶ್ವಸಂಸ್ಥೆಯು ಅಕ್ಟೋಬರ್ 2ನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಘೋಷಿಸಿದೆ. ಅಂದು ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವುದರ ಜತೆಗೆ ಭಜನೆಗಳನ್ನು ಹಾಡಲಾಗುತ್ತದೆ.

ಕಲಾವಿದೆ ಫ್ರೆಡ್ಡಾ ಬ್ರಿಲಿಯಂಟ್ ಕೆತ್ತಿದ ಮತ್ತು ಇಂಡಿಯಾ ಲೀಗ್‌ನ ಬೆಂಬಲದೊಂದಿಗೆ ರಚಿಸಲಾದ ಕಂಚಿನ ಪ್ರತಿಮೆಯನ್ನು 1968 ರಲ್ಲಿ ಚೌಕದಲ್ಲಿ ಸ್ಥಾಪಿಸಲಾಗಿತ್ತು. ಮಹಾತ್ಮ ಗಾಂಧಿಯವರು ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದರು.

Related Posts

Leave a Reply

Your email address will not be published. Required fields are marked *