ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿ ಜಿ-ರಾಮ್ ಜಿ ಎಂದು ಬದಲಾಯಿಸಲಾಗಿದ್ದು, ಜನವರಿ ಐದರಿಂದ ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನವನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ ಈ ವಿಷಯ ತಿಳಿಸಿದ್ದಾರೆ. ಬೆಂಗಳೂರಿನ ಯಲಹಂಕದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್ ನ ವಸತಿಗಳನ್ನು ನೆಲಸಮಗೊಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಆ ಪ್ರದೇಶ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಪ್ರದೇಶವಾಗಿದ್ದು, ಅದು ಜನವಸತಿಗೆ ಸೂಕ್ತವಾದ ಪ್ರದೇಶವಲ್ಲ. ಆದ್ದರಿಂದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನೆಲೆಸಿದ್ದವರಿಗೆ ನೋಟೀಸ್ ನೀಡಿ ತೆರವುಗೊಳಿಸಲು ಸೂಚನೆ ನೀಡಲಾಗಿತ್ತು ಎಂದರು.
ಆದರೆ ನಿವಾಸಿಗಳು ಸರ್ಕಾರದ ಸೂಚನೆಗೆ ಮಣಿಯದೇ ಇದ್ದ ಕಾರಣ, ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಬಹುತೇಕ ಜನರು ವಲಸಿಗರಾಗಿದ್ದು, ಮಾನವೀಯತೆಯ ದೃಷ್ಟಿಯಿಂದ ನಿರಾಶ್ರಿತರಿಗೆ ಉಳಿದುಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.


