ಮಸೀದಿಯಲ್ಲಿ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಾರಾಷ್ಟ್ರ ಕಾಂಗ್ರೆಸ್ ಉಪಾಧ್ಯಕ್ಷ ಹಿದಾಯತುಲ್ಲಾ ಪಟೇಲ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಅಕೋಲಾ ಜಿಲ್ಲೆಯ ಅಕೋಟ್ ತಾಲೂಕಿನ ಮೊಹಲಾ ಗ್ರಾಮದ ಮಸೀದಿಯಲ್ಲಿ ಹಿದಾಯತುಲ್ಲಾ ಪಟೇಲ್ ನಮಾಜ್ ಮುಗಿಸಿ ಮರಳುತ್ತಿದ್ದಾಗ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದ.
ಮಧ್ಯಾಹ್ನ 1.30ರ ಸುಮಾರಿಗೆ ಈ ದಾಳಿ ನಡೆದಿದ್ದು ಪಟೇಲ್ ಅವರ ಕುತ್ತಿಗೆ ಮತ್ತು ಎದೆಗೆ ತೀವ್ರ ಗಾಯಗಳಾಗಿದ್ದು, ರಕ್ತಸ್ರಾವವಾಗಿತ್ತು. ತಕ್ಷಣವೇ ಅಕೋಟ್‌ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆದರೆ, ಬುಧವಾರ ಬೆಳಿಗ್ಗೆ ಚಿಕಿತ್ಸೆ ಫಲಿಸದೆ ನಿಧನರಾದರು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮಂಗಳವಾರ ಮಧ್ಯಾಹ್ನ ಪ್ರಾರ್ಥನೆಗಾಗಿ ಪಟೇಲ್ ಮೊಹಲ್ಲಾದ ಜಾಮಾ ಮಸೀದಿಯಲ್ಲಿದ್ದರು. ನಮಾಜ್ ಮುಗಿಸಿ ಹೊರಬರುತ್ತಿದ್ದಂತೆ ದುಷ್ಕರ್ಮಿಯೋರ್ವ ಅವರ ಮೇಲೆ ಹಲ್ಲೆ ಮಾಡಿದ್ದು, ಪಟೇಲ್ ರಕ್ತಸಿಕ್ತ ಬಟ್ಟೆಗಳಿಂದ ಮಸೀದಿಯಿಂದ ಹೊರಬರುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ.
ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಧಿವಿಜ್ಞಾನ ತಜ್ಞರ ಸಹಾಯದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಆರೋಪಿಯನ್ನು ಬಂಧಿಸಲು ಆರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಕೋಟ್ ತಾಲ್ಲೂಕಿನ ಪಣಜ್ ಗ್ರಾಮದಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಚಂದ್ರಕಾಂತ್ ರೆಡ್ಡಿ ತಿಳಿಸಿದ್ದಾರೆ.
ಘಟನೆಯ ನಂತರ, ಮೊಹಲಾ ಮತ್ತು ಅಕೋಟ್ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರ್ಚಿತ್ ಚಂದಕ್ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಅಕೋಟ್ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಿದಾಯತುಲ್ಲಾ ಪಟೇಲ್ ಅಕೋಲಾ ಜಿಲ್ಲೆಯ ಜನಪ್ರಿಯ ಕಾಂಗ್ರೆಸ್ ನಾಯಕ. 2014 ಮತ್ತು 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಪ್ರಸ್ತುತ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಪುರಸಭೆ ಚುನಾವಣೆಗಳ ನಂತರ ಅಕೋಟ್‌ನಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿರುವ ಮಧ್ಯೆ ಈ ದಾಳಿ ನಡೆದಿದೆ.


