ಕಬ್ಬು ಕಟಾವು ಮಾಡಿ ಜೀವನ ಸಾಗಿಸಲು ಮಹಾರಾಷ್ಟ್ರದಿಂದ ಕುಟುಂಬ ಸಮೇತ ಬಂದು ಚಾಮರಾಜನಗರದಲ್ಲಿ ವಾಸವಿದ್ದ ಕಾರ್ಮಿಕರ ಮಕ್ಕಳು ಕಾಡು ಹಣ್ಣು ತಿಂದು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
ಕಬ್ಬು ಕಟಾವು ಮಾಡುವುದಕ್ಕಾಗಿ ಮಹಾರಾಷ್ಟ್ರದಿಂದ ಬರೋಬ್ಬರಿ 13 ಕುಟುಂಬಗಳು ಯಳಂದೂರು ತಾಲೂಕಿನ ಯರಿಯೂರಿಗೆ ಬಂದು ನೆಲೆಸಿದೆ. ಇವರ ಮಕ್ಕಳು ಭಾನುವಾರ ವಿಷಯುಕ್ತ ಕಾಡು ಹಣ್ಣು ತಿಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಿಚಣ್ಣು ಎಂಬ ಕಾಡು ಹಣ್ಣು ತಿಂದ ಮಹಿಳೆ ಹಾಗೂ 8 ಮಕ್ಕಳಿಗೆ ಇದ್ದಕ್ಕಿದ್ದಂತೆ ವಾಂತಿ ಶುರುವಾಗಿದೆ. ತಕ್ಷಣವೇ 108 ಸಹಾಯವಾಣಿಗೆ ಕರೆ ಮಾಡಿ ಎಲ್ಲರನ್ನೂ ತಕ್ಷಣ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.
ಅಸ್ವಸ್ಥರಿಗೆ ಗ್ಲುಕೋಸ್ ಹಾಗೂ ಆಕ್ಸಿಜನ್ ನೀಡಿ ಚಿಕಿತ್ಸೆ ಮುಂದುವರಿಸಲಾಗಿದೆ. ಎಲ್ಲ ರೋಗಿಗಳು ಚೇತರಿಸಿಕೊಂಡಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದ್ದು ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರು ಆದಷ್ಟು ಬೇಗ ಚೇತರಿಸಿಕೊಳ್ಳುವ ವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.