ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಾಭಾರತ ಧಾರವಾಹಿಯಲ್ಲಿ ಕರ್ಣ ಪಾತ್ರಧಾರಿ ಪಂಕಜ್ ಧೀರ್ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಬಿಆರ್ ಚೋಪ್ರಾ ನಿರ್ದೇಶನದ ಖ್ಯಾತ ಮಹಾಭಾರತ ಧಾರವಾಹಿಯಲ್ಲಿ ಪಂಕಜ್ ಧೀರ್ ಕರ್ಣನ ಪಾತ್ರದಿಂದ ಜನಪ್ರಿಯರಾಗಿದ್ದರು. ಅಲ್ಲದೇ ಬಾಲವುಡ್ ನ ಸೂಪರ್ ಹಿಟ್ ಚಿತ್ರಗಳಾದ ಅಂದಾಜ್, ಸೋಲ್ಜರ್, ಬಾದ್ ಷಾ, ತುಮ್ ಕೊ ನಾ ಬೂಲ್ ಪಾಯೆಂಗೆ ಮುಂತಾದ ಚಿತ್ರಗಳಲ್ಲಿ ಪೋಷಕ ನಟರಾಗಿ ಗಮನ ಸೆಳೆದಿದ್ದರು.
ಪಂಕಜ್ ಧೀರ್ ಕನ್ನಡದಲ್ಲಿ ವಿಷ್ಣುವರ್ಧನ್ ಮತ್ತು ಅಕ್ಷಯ್ ಕುಮಾರ್ ನಟಿಸಿದ್ದ ವಿಷ್ಣುವಿಜಯ ಸೇರಿದಂತೆ ಹಲವು ಚಿತ್ರಗಳಲ್ಲಿ ಕೂಡ ನಟಿಸಿದ್ದರು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪಂಕಜ್ ಧೀರ್ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಪಂಕಜ್ ಧೀರ್ ಪುತ್ರ ಹಾಗೂ ಸೊಸೆ ಕೂಡ ಕಲಾವಿದರಾಗಿದ್ದು, ಪುತ್ರ ನಿಕಿತನ್ ಧೀರ್ ಕೂಡಾ ನಟನಾಗಿದ್ದಾರೆ. ಚೆನ್ನೈ ಎಕ್ಸ್ ಪ್ರೆಸ್, ಜೋಧಾ ಅಕ್ಬರ್, ಸೂರ್ಯವಂಶಿ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದರೆ, ಸೊಸೆ ಕೃತಿಕಾ ಸೆಂಗರ್, ಜಾನ್ಸಿ ಕೀ ರಾಣಿ ಮುಂತಾದ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.