ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಸ್ತಾಪಿಸಿದ ಕ್ಷೇತ್ರ ಪುನರ್ ವಿಂಗಡಣೆ ವಿಷಯ ಇದೀಗ ವಿವಾದಕ್ಕೆ ತಿರುಗಿದ್ದು, ಪ್ರತಪಕ್ಷಗಳನ್ನು ಹಣಿಯಲು ಮಾಡಿರುವ ತಂತ್ರ ಎಂದು ದಕ್ಷಿಣ ಭಾರತ ರಾಜ್ಯ ಸರ್ಕಾರಗಳು ತಿರುಗಿಬಿದ್ದಿವೆ.
ಕ್ಷೇತ್ರ ಪುನರ್ ವಿಂಗಡಣೆ ಪ್ರಸ್ತಾಪಕ್ಕೆ ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ಸರ್ಕಾರಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಯಾವ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗುತ್ತದೆ ಎಂಬ ವಿಷಯ ಸ್ಪಷ್ಟಪಡಿಸುವಂತೆ ಆಗ್ರಹಿಸಿವೆ. ಕೇರಳ ಮತ್ತು ಆಂಧ್ರಪ್ರದೇಶಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಿತ್ ಶಾ ಹೇಳಿಕೆ ನಂಬಲು ಅನರ್ಹ ಎಂದು ಕಿಡಿಕಾರಿದ್ದಾರೆ. ಅಲ್ಲದೇ ದಕ್ಷಿಣ ಭಾರತ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣೆ ಯಾವ ಆಧಾರದ ಮೇಲೆ ಮಾಡುತ್ತಾರೆ? ಜನಸಂಖ್ಯೆ ಆಧಾರದ ಮೇಲೋ ಅಥವಾ ಭೂಪ್ರದೇಶದ ಆಧಾರದ ಮೇಲೂ ಅಥವಾ ಸಮುದಾಯದ ಆಧಾರದ ಮೇಲೋ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣೆಯಿಂದ 8 ಸಂಸತ್ ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆತಂಕ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ತೆಲಂಗಾಣದಲ್ಲಿರುವ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಪ್ರಸ್ತಾಪವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ದಕ್ಷಿಣ ಭಾರತದಲ್ಲಿ ಪ್ರತಿಪಕ್ಷಗಳನ್ನು ಹಣಿಯಲು ಬಿಜೆಪಿ ಕ್ಷೇತ್ರ ಪುನರ್ ವಿಂಗಡಣೆ ಮಾಡುತ್ತಿದೆ ಎಂದು ಆರೋಪಿಸಿವೆ. ಇದೇ ವೇಳೆ ಕೇಂದ್ರ ಸಚಿವ ಅಮಿತ್ ಶಾ ಕ್ಷೇತ್ರ ಪುನರ್ ವಿಂಗಡಣೆಯಿಂದ ಒಂದೂ ಕ್ಷೇತ್ರವೂ ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.