2025ರ ಪರೀಕ್ಷೆ ವೇಳೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ಕಡಿತದಿಂದಾಗಿ ವಿವಾದ ಉಂಟಾದ ಹಿನ್ನೆಲೆ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠವು ನೀಟ್ ಯುಜಿ ಫಲಿತಾಂಶ ಘೋಷಣೆಗೆ ತಾತ್ಕಾಲಿಕ ತಡೆ ನೀಡಿದೆ.
ಈ ಹಿಂದೆ ನ್ಯಾಯಾಲಯ ಆದೇಶ ನೀಡಿದ್ದರೂ ವಿಷಯದ ಬಗ್ಗೆ ಸೂಚನೆಗಳನ್ನು ಪಡೆಯಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಯಾವುದೇ ಪ್ರತಿನಿಧಿ ಹಾಜರಿರಲಿಲ್ಲ ಎಂದು ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ಅವರ ಪೀಠವು ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
ಮಧ್ಯಪ್ರದೇಶ ಹೈಕೋರ್ಟ್‌ನ ಈ ಆದೇಶ ದೇಶಾದ್ಯಂತ 21 ಲಕ್ಷ ನೀಟ್ ಯುಜಿ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರಿದ್ದು, ಪ್ರಕರಣದ ಮುಂದಿನ ವಿಚಾರಣೆ ನಾಲ್ಕು ವಾರಗಳ ನಂತರ ನಡೆಯಲಿದೆ. ಈ ನ್ಯಾಯಾಲಯದ ಆದೇಶ ಅಥವಾ ಆರೋಪಗಳ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಅಧಿಕಾರಿಗಳು ಅಧಿಕೃತ ಹೇಳಿಕೆ ನೀಡಿಲ್ಲ.
ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ. 1 ಕೇಂದ್ರದಲ್ಲಿ ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಡೆದ ಪರೀಕ್ಷೆಯ ಸಮಯದಲ್ಲಿ ಮಧ್ಯಾಹ್ನ 3.30 ಕ್ಕೆ ವಿದ್ಯುತ್ ಕಡಿತಗೊಂಡಿತ್ತು, ಬ್ಯಾಕಪ್ ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ಅಭ್ಯರ್ಥಿಗಳು ಪರೀಕ್ಷೆಯನ್ನು ಅತ್ಯಂತ ಕಡಿಮೆ ಬೆಳಕಿನಲ್ಲಿ ಬರೆಯಬೇಕಾಯಿತು ಎಂದು ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಲಾಗಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ಪರೀಕ್ಷೆಯ ಫಲಿತಾಂಶವನ್ನು ಜೂನ್ 14 ರಂದು ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ. ಈಗ ಮಧ್ಯಪ್ರದೇಶ ಹೈಕೋರ್ಟ್ ತಡೆ ನೀಡಿದೆ.