ಶಿವಮೊಗ್ಗ : ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 11 ಜನರು ನಾಯಿ ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ನೀಡಿರುವ ಮಾಹಿತಿಯಂತೆ, ಒಟ್ಟು 11 ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ.
ದಾಳಿ ಮಾಡಿದ ನಾಯಿಯು ಹುಚ್ಚು ನಾಯಿ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ಎಲ್ಲರಿಗೂ ತಕ್ಷಣವೇ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಅಗತ್ಯ ಲಸಿಕೆ ನೀಡಲಾಗಿದೆ.
ಹೊಳೆಹೊನ್ನೂರಿನ ಹೇಮಾವತಿ, ನಟರಾಜ, ಕವಿತಾ, ನೀಲಮ್ಮ , ಜಬ್ಬಾರ್ ಖಾನ್, ಮದಿಹಾ, ಅರಹತೊಳಲು ಗ್ರಾಮದ ಕೆ. ರಾಜಪ್ಪ, ತರೀಕೆರೆಯ ಗಿರೀಶ್ ಎಂಬುವವರಿಗೆ ನಾಯಿ ಕಚ್ಚಿದೆ ಎಂದು ತಿಳಿದು ಬಂದಿದೆ.


