ಮಿಚೆಲ್ ಮಾರ್ಷ್ ಮತ್ತು ನಿಕೊಲಸ್ ಪೂರನ್ ಸಿಡಿಲಬ್ಬರದ ಆಟದಿಂದ ಲಕ್ನೋ ಸೂಪರ್ ಜೈಂಟ್ಸ್ 4 ರನ್ ಗಳಿಂದ ಐಪಿಎಲ್ ಟಿ-20 ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.
ಕೋಲ್ಕತಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಲ್ ಎಸ್ ಜಿ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಕೆಕೆಆರ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 234 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಠಿಣ ಗುರಿ ಬೆಂಬತ್ತಿದ ಕೆಕೆಆರ್ ತಂಡ ನಾಯಕ ಅಜಿಂಕ್ಯ ರಹಾನೆ 35 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 61 ರನ್ ಬಾರಿಸಿದರೆ, ವೆಂಕಟೇಶ್ ಅಯ್ಯರ್ 29 ಎಸೆಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 45 ರನ್ ಗಳಿಸಿದರು. ಇವರಿಬ್ಬರು ಮೂರನೇ ವಿಕೆಟ್ ಗೆ 71 ರನ್ ಜೊತೆಯಾಟ ನಿಭಾಯಿಸಿದರು.
ಸುನೀಲ್ ನಾರಾಯಣ್ (30) ಮತ್ತು ಕ್ವಿಂಟನ್ ಡಿ ಕಾಕ್ (15) ಸಾಧಾರಣ ಹೋರಾಟ ನಡೆಸಿದರು. ಕೊನೆಯ ಎರಡು ಓವರ್ ನಲ್ಲಿ 38 ರನ್ ಗಳಿಸಬೇಕಾಗಿತ್ತು. ಈ ಹಂತದಲ್ಲಿ ರಿಂಕು ಸಿಂಗ್ ಏಕಾಂಗಿ ಹೋರಾಟ ನಡೆಸಿ 15 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 38 ರನ್ ಬಾರಿಸಿ ನಡೆಸಿದ ಹೋರಾಟ ಫಲ ನೀಡಲಿಲ್ಲ.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಎಲ್ ಎಸ್ ಜಿ ಮಿಚೆಲ್ ಮಾರ್ಷ್ ಮತ್ತು ನಿಕೊಲಸ್ ಪೂರನ್ ಬಿರುಸಿನ ಆಟದಿಂದ ಬೃಹತ್ ಮೊತ್ತ ಪೇರಿಸಿತು. ಮಾರ್ಷ್ 48 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 81 ರನ್ ಗಳಿಸಿದರೆ, ನಿಕೊಲಸ್ ಪೂರನ್ 36 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ ಸೇರಿದಂತೆ 87 ರನ್ ಬಾರಿಸಿ ಔಟಾಗದೇ ಉಳಿದರು. ಇದಕ್ಕೂ ಮುನ್ನ ಏಡಿಯನ್ ಮಾರ್ಕರಂ (47) ಮೊದಲ ವಿಕೆಟ್ ಗೆ ಮಾರ್ಷ್ ಜೊತೆ 99 ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು.