ಲಕ್ನೋ: ಆರಂಭಿಕರಾದ ಮಿಚೆಲ್ ಮಾರ್ಷ್ ಮತ್ತು ಏಡಿಯನ್ ಮಾರ್ಕರಂ ಅರ್ಧಶತಕಗಳ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆ 204 ರನ್ ಗುರಿ ಒಡ್ಡಿದೆ. ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ಎಲ್ ಎಸ್ ಜಿ 200ಕ್ಕಿಂತ ಅಧಿಕ ಮೊತ್ತ ದಾಖಲಿಸಿದೆ.
ಲಕ್ನೋದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಲಕ್ನೋ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿದೆ. ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿಗೆ 5 ವಿಕೆಟ್ ಪಡೆದು ಮಿಂಚಿದರೂ ಎಲ್ ಎಸ್ ಜಿ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ.
ಮಿಚೆಲ್ ಮಾರ್ಷ್ ಮತ್ತು ಮಾರ್ಕರಂ ಮೊದಲ ವಿಕೆಟ್ ಗೆ 76 ರನ್ ಜೊತೆಯಾಟ ನಿಭಾಯಿಸಿದರು. ಇದರಲ್ಲಿ 60 ರನ್ ಮಾರ್ಷ್ ಬ್ಯಾಟ್ ನಿಂದ ಹರಿದು ಬಂದಿತು. ಇದರಲ್ಲಿ 31 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ್ದವು. ಮಾರ್ಷ್ ನಂತರ ತಂಡವನ್ನು ಮುನ್ನಡೆಸಿದ ಮಾರ್ಕರಂ 38 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 53 ರನ್ ಗಳಿಸಿದರು.
ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಬೌಲರ್ ಗಳು ತಿರುಗೇಟು ನೀಡಿದ್ದರಿಂದ ಸತತವಾಗಿ ವಿಕೆಟ್ ಕಳೆದುಕೊಂಡು ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬದೋನಿ (30) ಮತ್ತು ಡೇವಿಡ್ ಮಿಲ್ಲರ್ (27) ಉಪಯುಕ್ತ ಕಾಣಿಕೆ ನೀಡಿ ತಂಡ 200ರ ಗಡಿ ದಾಟಲು ನೆರವಾದರು.