ಲಕ್ನೋ: ಆರಂಭಿಕ ಏಡಿಯಂ ಮರ್ಕರಂ ಮತ್ತು ನಿಕೊಲಸ್ ಪೂರನ್ ಅವರ ಅರ್ಧಶತಕಗಳ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ 6 ವಿಕೆಟ್ ಗಳಿಂದ ಐಪಿಎಲ್ ಟಿ-20 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಗೆಲುವಿನ ಹಾದಿಗೆ ಮರಳಿದೆ.
ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 180 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಲಕ್ನೋ ಸೂಪರ್ ಜೈಂಟ್ಸ್ 19.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಆರಂಭಿಕನಾಗಿ ಕಣಕ್ಕಿಳಿದ ರಿಷಭ್ ಪಂತ್ ಮತ್ತು ಏಡಿಯನ್ ಮರ್ಕರಂ ಮೊದಲ ವಿಕೆಟ್ ಗೆ 65 ರನ್ ಪೇರಿಸಿದರು. ರನ್ ಬರ ಎದುರಿಸುತ್ತಿದ್ದ ಪಂತ್ 21 ರನ್ ಬಾರಿಸಿ ಔಟಾದರೂ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ಮರ್ಕರಂ 31 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 58 ರನ್ ಬಾರಿಸಿದರು.
ಭರ್ಜರಿ ಫಾರ್ಮ್ ನಲ್ಲಿರುವ ನಿಕೊಲಸ್ ಪೂರನ್ ಈ ಪಂದ್ಯದಲ್ಲೂ ರನ್ ಅಬ್ಬರ ಮುಂದುವರಿಸಿದ್ದು, 34 ಎಸೆತಗಳಲ್ಲಿ 1 ಬೌಂಡರಿ ಮತ್ತು 7 ಸಿಕ್ಸರ್ ನೊಂದಿಗೆ 61 ರನ್ ಚಚ್ಚಿದರು. ಆಯುಷ್ ಬದೋನಿ 20 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ 28 ರನಬ್ ಬಾರಿಸಿ ತಂಡಕ್ಕೆ ಕೊನೆಯ ಓವರ್ ನಲ್ಲಿ ಗೆಲುವಿನ ದಡ ದಾಟಿಸಿದರು.
ಗಿಲ್, ಸಾಯಿ ಭರ್ಜರಿ ಆರಂಭ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ವೈಯಕ್ತಕ ಅರ್ಧಶತಕ ಬಾರಿಸಿದ್ದೂ ಅಲ್ಲದೇ ಮೊದಲ ವಿಕೆಟ್ ಗೆ 12 ಓವರ್ ಗಳಲ್ಲಿ 120 ರನ್ ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು.
ಗಿಲ್ 38 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 60 ರನ್ ಪೇರಿಸಿದರೆ, ಸಾಯಿ ಸುದರ್ಶನ್ 37 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 56 ರನ್ ಗಳಿಸಿದರು. ಇವರಿಬ್ಬರು ನಿರ್ಗಮನದ ನಂತರ ತಂಡ ನಾಟಕೀಯ ಕುಸಿತ ಅನುಭವಿಸಿದ್ದೂ ಅಲ್ಲದೇ ರನ್ ಗಳಿಸಲು ಪರದಾಡಿ 200ರ ಗಡಿ ದಾಟಲು ವಿಫಲವಾಯಿತು.
ಮಧ್ಯಮ ಕ್ರಮಾಂಕದಲ್ಲಿ ರುದರ್ಫೋಡ್ 22 ರನ್ ಮತ್ತು ಶಾರೂಖ್ ಖಾನ್ 11 ರನ್ ಬಾರಿಸಿ ಬೇಗನೇ ನಿರ್ಗಮಿಸಿದರು. ಎಲ್ ಎಸ್ ಜಿ ಪರ ಶಾರ್ದೂಲ್ ಠಾಕೂರ್ ಮತ್ತು ರವಿ ಬಿಶ್ನೋಯಿ ತಲಾ 2 ವಿಕೆಟ್ ಪಡೆದು ಗುಜರಾತ್ ರನ್ ವೇಗಕ್ಕೆ ಕಡಿವಾಣ ಹಾಕಿದರು.