ಲಕ್ನೋ: ಒತ್ತಡದ ನಡುವೆಯೂ ಸಂಘಟಿತ ಪ್ರದರ್ಶನ ನೀಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ತವರಿನ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್ ಗಳ ರೋಚಕ ಜಯ ಸಾಧಿಸಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 203 ರನ್ ಸಂಪಾದಿಸಿದರೆ, ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು.
ಹಾರ್ದಿಕ್ ಪಾಂಡ್ಯ ಜೀವನಶ್ರೇಷ್ಠ 5 ವಿಕೆಟ್ ಹಾಗೂ ಸೂರ್ಯಕುಮಾರ್ ಸಿಡಿಲಬ್ಬರದ ಅರ್ಧಶತಕ ಗಳಿಸಿದರೂ ಕೊನೆಯ ಹಂತದಲ್ಲಿ ಎಡವಿದ ಮುಂಬೈ ಸೋಲುಂಡಿತು. ಕೊನೆಯ ಓವರ್ ನಲ್ಲಿ 24 ರನ್ ಗಳಿಸಬೇಕಾದ ಒತ್ತಡಕ್ಕೆ ಒಳಗಾಗಿದ್ದಾಗ ಗೆಲುವಿನ ಜವಾಬ್ದಾರಿ ಹೊತ್ತ ಪಾಂಡ್ಯ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರೂ ನಂತರ ರನ್ ಗಳಿಸಲು ವಿಫಲರಾಗಿದ್ದು ತಂಡಕ್ಕೆ ದೊಡ್ಡ ಆಘಾತ ನೀಡಿತು.
ಇದಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 67 ರನ್ ಚಚ್ಚಿದರು. ನಮನ್ ಧಿರ್ 24 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸೇರಿ 46 ರನ್ ಗಳಿಸಿದರು. ತಿಲಕ್ ವರ್ಮಾ (25) ಮತ್ತು ಹಾರ್ದಿಕ್ ಪಾಂಡ್ಯ (ಅಜೇಯ 28) ಉತ್ತಮ ಪ್ರದರ್ಶನ ತೋರಿದರೂ ಗೆಲುವು ಕೈತಪ್ಪಿತು.