Menu

ಇರಾನ್‌ ಇಸ್ರೇಲ್‌ ಸಂಘರ್ಷದಿಂದ ಎಲ್‌ಪಿಜಿ ಕೊರತೆ: ಹೋಟೆಲ್‌ ಬಂದ್‌ ಆತಂಕ

ಇರಾನ್-ಇಸ್ರೇಲ್ ಯುದ್ಧ ಜಾಗತಿಕವಾಗಿ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಇರಾನ್‌ಗೆ ಬೇರೆ ದೇಶಗಳಿಂದ ರಫ್ತು ಆಗುತ್ತಿದ್ದ ವಸ್ತುಗಳು ರಫ್ತು ಆಗುತ್ತಿಲ್ಲ, ವಿಮಾನ ಸಂಚಾರ ಸ್ಥಗಿತಗೊಂಡಿದೆ. ಪ್ರಮುಖವಾಗಿ ಹಲವು ದೇಶಗಳಲ್ಲಿ ತೈಲ ಸಮಸ್ಯೆ ಎದುರಾಗಿದ್ದು, ಬಿಕ್ಕಟ್ಟು ಸೃಷ್ಟಿಯಾಗಿದೆ.

ಎಲ್‌ಪಿಜಿ ಪೂರೈಕೆ ವ್ಯತ್ಯಯಗೊಂಡು ಮುಂಬೈನಲ್ಲಿ 20% ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಬಂದ್ ಆಗಿವೆ ಎಂದು ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘ ತಿಳಿಸಿದೆ. ಅನಿಲ ಪೂರೈಕೆ ಪರಿಸ್ಥಿತಿ ಸುಧಾರಿಸದಿದ್ದರೆ ಮುಂದಿನ ಎರಡು ದಿನಗಳಲ್ಲಿ ನಗರದ ಶೇ.50 ಹೋಟೆಲ್‌ಗಳು ಮುಚ್ಚುವ ಸಾಧ್ಯತೆಗಳಿವೆ ಎಂದು ಹೇಳಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಹೋಟೆಲ್‌ಗಳನ್ನು ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಗ್ಯಾಸ್‌ ಪೂರೈಕೆಯಲ್ಲಿ ಶೇಕಡಾ 50 ಕಡಿತವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮೂರು ದಿನಗಳಲ್ಲಿ ಹೋಟೆಲ್ ಉದ್ಯಮ ಸಂಪೂರ್ಣ ಸ್ಥಗಿತ ಸಾಧ್ಯತೆಯಿದೆ. ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಉದ್ಯಮ ದ್ ಮಾಡುವುದು ಅನಿವಾರ್ಯ ಎಂದು ಹೋಟೆಲ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ ತಿಳಿಸಿದ್ದಾರೆ.

ಮುನ್ಸೂಚನೆ ನೀಡಿದ್ದರೆ ಈ ಪರಿಸ್ಥಿತಿ ಎದುರಿಸುವ ಪ್ರಮೇಯವೇ ಇರುತ್ತಿರಲಿಲ್ಲ. ನಾವು ಬಂದ್ ನಿರ್ಧಾರ ಕೈಗೊಂಡಿಲ್ಲ, ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. 15 ದಿನಗಳ ಮೊದಲೇ
ಸೂಚನೆ ನೀಡಬೇಕಿತ್ತು. ದಿಢೀರ್ ಪೂರೈಕೆ ಸ್ಥಗಿತಗೊಂಡರೆ ಬಂದ್ ಮಾಡದೆ ಬೇರೆ ದಾರಿ ಇಲ್ಲ ಎಂದಿದ್ದಾರೆ.

ಮೈಸೂರಿನ ಹೋಟೆಲ್ ಮಾಲೀಕರು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಮತ್ತು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ವಾರದಿಂದ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯವಾಗಿದೆ. ಆರ್ಡರ್ ಮಾಡಿ ಮೂರು ದಿನಗಳ ನಂತರವೂ ಸಿಗುತ್ತಿಲ್ಲ. ಇದರ ಜೊತೆಗೆ, ಮೂರು ಬಾರಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಿದರೆ, ಅವರು ಹೋಟೆಲ್‌ಗಳಿಂದ ವಿಮುಖರಾಗಬಹುದು ಎಂಬ ಆತಂಕ ಎದುರಾಗಿದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ ಹೇಳಿದ್ದಾರೆ.

ಚೆನ್ನೈ ಹೋಟೆಲ್ ಅಸೋಸಿಯೇಷನ್ ತಮಿಳುನಾಡು ಸಿಎಂಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ. ವಿತರಕರು ಸಿಲಿಂಡರ್ ಪೂರೈಕೆ ಸಂಪೂರ್ಣ ಸ್ಥಗಿತ ಮಾಡಿದ್ದಾರೆ. ಬಹುತೇಕ ರೆಸ್ಟೋರೆಂಟ್ ಬಂದ್ ಮಾಡುವ ಪರಿಸ್ಥಿತಿ ಬಂದಿದೆ ಎಂದು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *