Menu

ಕುರಿಗಾಹಿಗಳ ಕ್ಷೇಮಾಭಿವೃದ್ಧಿ ರಕ್ಷಣೆ ವಿಧೇಯಕ ಕೆಳಮನೆ ಅಂಗೀಕಾರ

CM Siddaramaiah

ಬೆಂಗಳೂರು: ರಾಜ್ಯದಲ್ಲಿ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳಿಗೆ ಕ್ಷೇಮಾಭಿವೃದ್ಧಿ ಕ್ರಮ ಹಾಗೂ ಅವರ ವಿರುದ್ಧ ದೌರ್ಜನ್ಯಗಳ ಅಪರಾಧ ಎಸಗುವುದನ್ನು ತಡೆಗಟ್ಟುವ ಉದ್ದೇಶವುಳ್ಳ 2025ನೇ ಸಾಲಿನ ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ(ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧದ ರಕ್ಷಣೆ) ವಿಧೇಯಕಕ್ಕೆ ವಿಧಾನಸಭೆಯಲ್ಲಿಂದು ಅಂಗೀಕಾರ ದೊರೆಯಿತು.

ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಅವರು ವಿಧೇಯಕವನ್ನು ಮಂಡಿಸಿ ವಿವರಣೆ ನೀಡುತ್ತಾ, ರಾಜ್ಯದಲ್ಲಿ 15 ಸಾವಿರ ಕುರಿಗಾಹಿಗಳು ನೊಂದಣಿಯಾಗಿದ್ದಾರೆ. 4 ಸಾವಿರ ಕುರಿಗಾಹಿಗಳಿಗೆ ಗುರುತಿನಚೀಟಿ ನೀಡಲಾಗಿದೆ. ಮೂರು ವರ್ಷದಲ್ಲಿ 242 ಕುರಿಗಾಹಿಗಳ ದೌರ್ಜನ್ಯಕ್ಕೆ ಸಂಬಂಧಿಸಿದ ಕೇಸುಗಳು ದಾಖಲಾಗಿವೆ. ಅವರು ವಲಸೆ ಹೋದಾಗ ಕುರಿತು ಹೊತ್ತುಕೊಂಡು ಹೋಗುವುದು, ದೌರ್ಜನ್ಯ ನಡೆಸುವುದು, ಅತ್ಯಾಚಾರ ಎಸಗುವ ಕೃತ್ಯಗಳು ಜರುಗಿವೆ. ಹೀಗಾಗಿ ಇಂತಹವುಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕುರಿಗಾಹಿಗಳ ಕಲ್ಯಾಣ ಕಾರ್ಯಕ್ರಮ ಜಾರಿ ಮಾಡುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ ಎಂದರು.

ಪ್ರತಿಯೊಬ್ಬ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಯು ಫಲಾನುಭವಿಯಾಗಿ ನೋಂದಾಯಿಸಿಕೊಳ್ಳಬೇಕು. ಕೈಗೆಟಕುವ ಬೆಲೆಯಲ್ಲಿ ವಸತಿಗಾಗಿ ಭೂಮಿ ಮಂಜೂರಾತಿ, ಜೀವವಿಮೆ, ಆರೋಗ್ಯವಿಮೆ, ಪಶುವಿಮೆ, ಆರೋಗ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳು, ಕೌಶಲ್ಯ ಉನ್ನತೀಕರಣ, ಆಹಾರ ಭದ್ರತೆ, ಕಲ್ಯಾಣ ಕಾರ್ಯಕ್ರಮಗಳಾಗಿವೆ ಅಲ್ಲದೆ ಜಾನುವಾರುಗಳಿಗೆ ಲಸಿಕೆ, ಚಿಕಿತ್ಸೆ, ಕುರಿಗಾಹಿಗಳ ಉತ್ಪನ್ನಗಳಿಗೆ ಮಾರಾಟ ಬೆಂಬಲ, ನಷ್ಟದ ಸಂದರ್ಭದಲ್ಲಿ ನಷ್ಟ ಪರಿಹಾರ ಮೊದಲಾದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಒದಗಿಸಲಾಗುತ್ತದೆ. ಒಬ್ಬ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಯು ಯಾವುದೇ ಕಾನೂನಾತಕ ಆಧಾರವಿಲ್ಲದೆ, ಸಾರ್ವಜನಿಕ ಸ್ವತ್ತು, ಸರ್ಕಾರಿ ಭೂಮಿ ಅಥವಾ ಅರಣ್ಯಭೂಮಿಗೆ ಪ್ರವೇಶಿಸುವುದನ್ನು ನಿರಾಕರಿಸಿದರೆ ಅಂಥ ವ್ಯಕ್ತಿಯು ಒಂದು ವರ್ಷದ ಸೆರೆವಾಸ, 50 ಸಾವಿರ ಜುಲಾನೆಯಿಂದ ದಂಡಿತನಾಗಬೇಕು.

ಮೀಸಲು ಅರಣ್ಯವನ್ನು ಇದರಿಂದ ಹೊರತಪಡಿಸಲಾಗಿದೆ. ಕುರಿಗಾಹಿ ದಾರಿಗೆ ಅಡ್ಡಿ ಉಂಟು ಮಾಡುವ ವ್ಯಕ್ತಿಗೆ 2 ವರ್ಷಗಳ ಸೆರವಾಸ, 1 ಲಕ್ಷ ರೂ. ದಂಡವಿದೆ. ಉದ್ದೇಶಪೂರ್ವಕವಾಗಿ ಕುರಿಗಾಯಿಯನ್ನು ಅವಮಾನಿಸಿದರೆ, ನಿಂದಿಸಿದರೆ ಆರು ತಿಂಗಳ ಅವಧಿಯ, 5 ವರ್ಷದವರೆಗೆ ವಿಸ್ತರಿಸಬಹುದಾದ ಸೆರೆವಾಸ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

ಕುರಿಗಾಹಿ ಮರಣಕ್ಕೆ ಕಾರಣವಾಗುವ ವ್ಯಕ್ತಿಯನ್ನು ಜಾರಿಯಲ್ಲಿರುವ ಸಂಬಂಧಪಟ್ಟ ಕ್ರಿಮಿನಲ್‌ ಕಾನೂನಿನಡಿ ದಂಡಿಸಲಾಗುತ್ತದೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಎಂಎಸ್‌‍ ಕಾಯ್ದೆಯಡಿ ದಂಡಿಸಲಾಗುತ್ತದೆ. ಕುರಿಗಾಹಿಯು ನ್ಯಾಯಿಕ ನೆರವನ್ನು ಪಡೆಯುವುದರಿಂದ ತಡೆಯುವ ವ್ಯಕ್ತಿಗೆ 2 ವರ್ಷಗಳ ಸೆರೆವಾಸ, 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಸೂಕ್ತ ಪ್ರಾಧಿಕಾರದ ಗಮನಕ್ಕೆ ತರದೆ ಕುರಿಗಾಹಿಯಿಂದ ಹಾನಿಗಳನ್ನು ಕ್ಲೈಮ್‌ ಮಾಡುವ ವ್ಯಕ್ತಿಗೆ ಮೂರು ವರ್ಷ ಅವಧಿಯ ಸೆರೆವಾಸ ಮತ್ತು 1 ಲಕ್ಷ ರೂ. ದಂಡ ವಿಧಿಸುವುದನ್ನು ವಿಧೇಯಕ ಪ್ರಸ್ತಾಪಿಸಿದೆ.

ವಿಧೇಯಕ ಕುರಿತು ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಕುರಿಗಾಹಿಗಳಿಗೆ ಮಳೆಯಲ್ಲಿ ರಕ್ಷಣೆಗೆ ಟೆಂಟ್‌ ಕೊಡಬೇಕು, ಅವರಿಗೆ ಕಾನೂನು ಸೌಲಭ್ಯ ಒದಗಿಸಬೇಕು, ದೌರ್ಜನ್ಯ ಎಸಗುವರನ್ನು ಶಿಕ್ಷೆಗೊಳಿಸಬೇಕು ಎಂದರು.

ಶಾಸಕರಾದ ಜಿ.ಟಿ.ಪಾಟೀಲ್‌, ಕಿಮನೆ ಕಟ್ಟಿ, ಟಿ.ಬಿ.ಜಯಚಂದ್ರ, ಸುರೇಶ್‌ ಗೌಡ, ಧೀರಜ್‌ ಮುನಿರಾಜು, ಶಿವಲಿಂಗೇಗೌಡ, ವಿಜಯಾನಂದ ಕಾಶಂಪ್ಪನವರ್‌, ಶ್ರೀನಿವಾಸ್‌‍ ಮೊದಲಾದವರು ವಿಧೇಯಕ ಕುರಿತು ಮಾತನಾಡಿ ಸಲಹೆಸೂಚನೆಗಳ ಮೇಲೆ ಬೆಳಕು ಚೆಲ್ಲಿದರು.

ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ದಂಡನೆಗೆ ಸಂಬಂಧಪಟ್ಟಂತೆ ಅಗತ್ಯ ತಿದ್ದುಪಡಿ ಮಾಡಲಾಗುವುದು ಎಂದರು.

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಮಾತನಾಡಿ, ಎಲ್ಲಾ ಕಾಲದಲ್ಲೂ ಎಲ್ಲಾ ಜನಾಂಗದವರು ಕುರಿ ಸಾಕುತ್ತಾರೆ. ಅವರಿಗೆ ರಕ್ಷಣೆಗೆ ಈ ವಿಧೇಯಕ ಅಗತ್ಯವಿದ್ದು, ಸ್ವಾಗತಿಸುವುದಾಗಿ ಹೇಳಿದರು. ಬಳಿಕ ಸಭಾಧ್ಯಕ್ಷರು ಮತಕ್ಕೆ ಹಾಕಿದಾಗ ಧ್ವನಿ ಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.

Related Posts

Leave a Reply

Your email address will not be published. Required fields are marked *