ಭದ್ರಾವತಿ ತಾಲೂಕಿನ ಅಂತರಗಂಗೆಯಲ್ಲಿ ಪ್ರೀತಿಗೆ ಕುಟುಂಬದವರು ವಿರೋಧಿಸುತ್ತಿದ್ದಾರೆಂದು ಮನನೊಂದ ಯುವಜೋಡಿ ಸಾಯಲೆಂದು ಕಾಲುವೆಗೆ ಹಾರಿದ್ದು, ಯುವತಿ ಮೃತಪಟ್ಟರೆ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸ್ವಾತಿ (19) ಮೃತಪಟ್ಟ ಯುವತಿ. ಈಕೆಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿ ಸೂರ್ಯ (20) ಬದುಕುಳಿದಿದ್ದು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇವರಿಬ್ಬರೂ ಶಿವಮೊಗ್ಗ ಜಿಲ್ಲೆಯ ಅಂತರಗಂಗೆಯ ಭೋವಿ ಕಾಲನಿ ನಿವಾಸಿಗಳು. ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹಲವು ಪ್ರವಾಸಿ ತಾಣಗಳಲ್ಲಿ ಸುತ್ತಾಡಿದ್ದಾರೆ.
ಇತ್ತೀಚೆಗೆ ಪ್ರೀತಿ ವಿಚಾರ ಮನೆಯವರಿಗೆ ತಿಳಿದು ವಿರೋಧ ವ್ಯಕ್ತಪಡಿಸಿ ಬುದ್ಧಿವಾದ ಹೇಳಿದ ಕಾರಣ ಇಬ್ಬರೂ ಮನನೊಂದು ಇರುವೆ ಪುಡಿ ತಿಂದು ಅಂತರಗಂಗೆಯ ಉಕ್ಕುಂದದಲ್ಲಿರುವ ಕಾಲುವೆಗೆ ಹಾರಿದ್ದಾರೆ. ಸೂರ್ಯ ಮರದ ದಿಮ್ಮಿಯ ಸಹಾಯದಿಂದ ಬದುಕುಳಿದಿದ್ದಾನೆ. ನೀರಿನ ಸೆಳೆತಕ್ಕೆ ಸಿಲುಕಿದ ಸ್ವಾತಿ ನೀರುಪಾಲಾಗಿದ್ದಾಳೆ. ಸ್ವಾತಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ದಿನಗಳಿಂದ ಶೋಧ ನಡೆಸಿ ಮೃತದೇಹ ಪತ್ತೆ ಹಚ್ಚಿದ್ದಾರೆ.
ಸ್ವಾತಿ ಪ್ರಥಮ ಪದವಿ ವಿದ್ಯಾರ್ಥಿನಿಯಾಗಿದ್ದರೆ, ಸೂರ್ಯ ಕೂಲಿ ಕೆಲಸ ಮಾಡುತ್ತಿದ್ದ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಾತಿಯನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದ, ಸ್ವಾತಿಯ ಕುಟುಂಬಸ್ಥರು ಆಕೆಯ ಓದು ಮುಗಿಯುವವರೆಗೆ ಮದುವೆಗೆ ಅವಕಾಶ ನೀಡಲಿಲ್ಲ. ಈ ವಿಷಯವಾಗಿ ಸೆಪ್ಟೆಂಬರ್ 21 ರಂದು ಇಬ್ಬರ ನಡುವೆ ಜಗಳವೂ ನಡೆದಿತ್ತು.
ಸ್ವಾತಿಯನ್ನು ಸೂರ್ಯ ಮನೆಯಿಂದ ಭದ್ರಾ ಕಾಲುವೆಗೆ ಕರೆದೊಯ್ದು ಅಲ್ಲಿಂದ ತಳ್ಳಿ ಕೊಲೆ ಮಾಡಿರುವುದಾಗಿ ಆಕೆಯ ಕುಟುಂಬ ಆರೋಪಿಸಿದೆ. ಸೂರ್ಯ ಮತ್ತು ಕೊಲೆಗೆ ಕುಮ್ಮಕ್ಕು ನೀಡಿದ್ದಾರೆಂದು ಆತನ ತಂದೆ ಸ್ವಾಮಿ ಮೇಲೆ ಭದ್ರಾವತಿ ಠಾಣೆಗೆ ಸ್ವಾತಿ ಕುಟುಂಬ ದೂರು ನೀಡಿದೆ. ಭದ್ರಾವತಿ ಗ್ರಾಮಾಂತರ ಪೊಲೀಸರು ಸೂರ್ಯ ಮತ್ತು ಸ್ವಾಮಿ ವಿರುದ್ಧ ಕೊಲೆ ಕೇಸ್ ದಾಖಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅಪರಿಚಿತ ಮಹಿಳೆಯ ಶವ ಪತ್ತೆ
ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮ ವ್ಯಾಪ್ತಿಯ ಕಾಲುವೆ ಬಳಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ ಆಗಿದೆ. ಈವರೆಗೆ ಶವದ ಗುರುತು ಪತ್ತೆ ಆಗಿಲ್ಲ. ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.